ಬಾಂಡ್‍ಗಳ ದಾಖಲೆ ಬಹಿರಂಗಕ್ಕೆ ಆಗ್ರಹಿಸಿ ಎಸ್‍ಬಿಐ ಬ್ಯಾಂಕ್ ಮುಂದೆ ಯುವ ಕಾಂಗ್ರೆಸ್ ಪ್ರತಿಭಟನೆ
ಕಲಬುರಗಿ:ಮಾ.12:ಎಸ್‍ಬಿಐ ಬಾಂಡ್‍ಗಳ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಯ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಶಿವಾನಂದ್ ಹೊನಗುಂಟಿ ಅವರು ಮಾತನಾಡಿ, ಸರ್ವೊಚ್ಛ ನ್ಯಾಯಾಲಯ ಆದೇಶ ಮಾಡಿದರೂ ಎಸ್‍ಬಿಐ ಬಾಂಡ್‍ಗಳನ್ನು ಬ್ಯಾಂಕ್ ಗ್ರಾಹಕರಿಗೆ ವಿತರಣೆ ಮಾಡದೇ ಕೇಂದ್ರ ಸರ್ಕಾರದ ಏಕ ನಿರ್ಣಯ ಕೈಗೊಳ್ಳುತ್ತಿದೆ ಎಂದು ಖಂಡಿಸಿದರು.
ಎಸ್‍ಬಿಐ ಬ್ಯಾಂಕ್ ಯಾರ ಅಡಿಯಲ್ಲಿ ಕೆಲಸ ಮಾಡುತ್ತಿದೆ? ಇದು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಬೆಯಾಗಿದೆಯಾ? ಸ್ವಿಸ್ ಬ್ಯಾಂಕ್ ದಾಖಲೆ ಬಹಿರಂಗ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಈಗ ಎಸ್‍ಬಿಐ ದಾಖಲೆ ಬಹಿರಂಗಪಡಿಸಲು ಗಡಗಡ ನಡುಗುತ್ತಿದ್ದಾರೆ ಏಕೆ? ಸುಪ್ರೀಂ ಕೋರ್ಟ್ ಆದೇಶ ಪಾಲಿಸದೇ ಇರುವ ಎಸ್‍ಬಿಐ ಬ್ಯಾಂಕ್‍ಗೆ ಧಿಕ್ಕಾರ ಎಂದು ಅವರು ಹೇಳಿದರು.
ಪಕ್ಷದ ಯುವ ಘಟಕದ ಜಿಲ್ಲಾ ಅಧ್ಯಕ್ಷ ಶಿವಾನಂದ್ ಆರ್. ಹೊನಗುಂಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಈರಣ್ಣ ಝಳಕಿ, ಮುಖಂಡರಾದ ಗೌತಮ್ ಕರಿಕಲ್, ಪರಶುರಾಮ್ ನಾಟೀಕಾರ್, ಶಕೀಲ್ ಸರಡಗಿ, ಅಮರ್ ಶಿರವಾಳ್, ಉಲ್ಲಾಸ್ ಪಾಟೀಲ್, ಸೈಯದ್ ರಕಿಬ್, ಟೈಗರ್ ವಿಗ್ನೇಶ್, ಸಂಘಪಾಲ್, ಗಣೇಶ್ ನಾಗನಳ್ಳಿ, ಶೇಖ್ ಸಮರಿನ್, ಸಂಪೂರ್ಣ, ರಾಮ್ ಪ್ರಸಾದ್ ಕಾಂಬಳೆ, ಚಂದ್ರು ನೆಲ್ಲೂರ್, ರಮೇಶ್ ಹಡಪದ್ ಮುಂತಾದವರು ಪಾಲ್ಗೊಂಡಿದ್ದರು.