ನಾಮಫಲಕದಲ್ಲಿ ಕನ್ನಡ ಭಾಷೆ ಶೇ 60 ರಷ್ಟು ಪ್ರದರ್ಶನ
ಸಂಜೆವಾಣಿ ವಾರ್ತೆ
ದಾವಣಗೆರೆ,ಮಾ.೧೨; ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ-2024 ರ ತಿದ್ದುಪಡಿಯನ್ವಯ ನಾಮಫಲಕದ ಮೇಲ್ಬಾಗದಲ್ಲಿ ಶೇ 60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದ್ದು ಇದರ ಅನುಷ್ಠಾನ ಮಾರ್ಚ್ 13 ರಿಂದ ಜಾರಿಗೆ ಬರಲಿದೆ. ಆದರೆ ಸ್ವಯಂಪ್ರೇರಿತವಾಗಿ ಕನ್ನಡ ಭಾಷೆ ಪ್ರದರ್ಶನಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.ಅವರು  ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ 2022 ಮತ್ತು ತಿದ್ದುಪಡಿ ವಿಧೇಯಕ-2024 ರನ್ವಯ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಪ್ರದರ್ಶನವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಕರೆಯಲಾಗಿದ್ದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯದಲ್ಲಿನ ಎಲ್ಲಾ ಉದ್ದಿಮೆಗಳು, ಕಾರ್ಖಾನೆಗಳು, ಬ್ಯಾಂಕ್‍ಗಳು, ಸಂಘ, ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಶಾಲಾ, ಕಾಲೇಜುಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಶೇ 60 ರಷ್ಟು ಕನ್ನಡ ಭಾಷೆಯ ಪ್ರದರ್ಶನ ಇರಲೇಬೇಕಾಗುತ್ತದೆ. ಕನ್ನಡವನ್ನು ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ 5 ಸಾವಿರದಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ರಾಜ್ಯದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಎಲ್ಲರೂ ಸ್ವಯಂ ಪ್ರೇರಿತವಾಗಿ ಕನ್ನಡ ಬಳಕೆ ಮಾಡಬೇಕು. ಒಂದು ವೇಳೆ ಸಂಪೂರ್ಣವಾಗಿ ಕನ್ನಡ ಬಳಕೆ ಮಾಡುವುದಾದರೇ ಯಾವುದೇ ಅಭ್ಯಂತರ ಇರುವುದಿಲ್ಲ. ಬ್ಯಾಂಕ್, ಉದ್ದಿಮೆಗಳು ತ್ರಿಭಾಷಾ ಸೂತ್ರ ಪಾಲನೆ ಮಾಡುತ್ತಿದ್ದಲ್ಲಿ ಮೊದಲ ಸಾಲಿನಲ್ಲಿ ಕನ್ನಡ ಭಾಷೆ ಇರಬೇಕು ಎಂದರು.ಜಿಲ್ಲೆಯ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆದ 12846 ಜನರು ಇದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಉದ್ದಿಮೆದಾರರ ಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಪ್ರದರ್ಶನದ ಅನುಷ್ಠಾನ ಮಾಡಲಾಗಿದ್ದು ಶೇ 50 ಕ್ಕಿಂತಲೂ ಹೆಚ್ಚಿದೆ. ಇದನ್ನು ಶೇ 100 ರಷ್ಟು ಎಲ್ಲಾ ಉದ್ದಿಮೆಗಳು, ಸಂಸ್ಥೆಗಳಲ್ಲಿ ಅನುಷ್ಠಾನ ಮಾಡಲು ಕಾರ್ಯಪಡೆಯನ್ನು ರಚಿಸಲಾಗಿದೆ. ಕಾನೂನು ಅನುಷ್ಠಾನಕ್ಕೂ ಮೊದಲು ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಳ್ಳಲು ಮಾರ್ಚ್ 13 ರ ವರೆಗೆ ಅವಕಾಶ ನೀಡಲಾಗಿದ್ದು ನಂತರದಲ್ಲಿ ಅನುಷ್ಠಾನ ಮಾಡದ ಉದ್ದಿಮೆದಾರರು, ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸುವ ಮೂಲಕ ಕಡ್ಡಾಯವಾಗಿ ಅನುಷ್ಠಾನ ಮಾಡಲು ಆಯಾ ವಿಭಾಗದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.