ಭಗವಂತನನ್ನು ಕಾಣಬೇಕಾದರೆ ಗುರುಗಳು ಬೇಕು

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೧೨; ಶ್ರೀ ರಾಘವೇಂದ್ರ ಸ್ವಾಮಿಗಳು ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಸಂಸ್ಕಾರ ನೀಡಿದ ಮೇರು ವ್ಯಕ್ತಿತ್ವದ ಗುರುಗಳು ಎಂದು ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಹೇಳಿದರು.ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು.ಭಗವಂತನನ್ನು ಕಾಣಬೇಕಾದರೆ ಗುರುಗಳು ಬೇಕು. ರಾಯರು ಜಾತಿ, ಮತ, ಲಿಂಗ ಭೇದಗಳನ್ನು ಮೀರಿದ ದೊಡ್ಡ ಗುರುಗಳು. ಪ್ರತಿಯೊಂದು ಊರಿನಲ್ಲಿ ರಾಯರ ಮಠಗಳು ಇರುವುದರಿಂದ ನಾಸ್ತಿಕರೂ ಆಸ್ತಿಕರಾಗಿ ಇಡೀ ಸಮಾಜ ಸುಸಂಸ್ಕೃತವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಘವೇಂದ್ರ ಸ್ವಾಮಿಗಳು ಮಹಾತ್ಮರು. ಕಾಲಿಲ್ಲದವರಿಗೆ ನಡೆಯುವ ಶಕ್ತಿಯನ್ನು ಕೊಟ್ಟ ಕರುಣಾಳುಗಳು. ಅಂಥವರ ಉತ್ಸವ ಆಚರಿಸುತ್ತಿರುವುದರಿಂದ ದಾವಣಗೆರೆಗೆ ಒಳ್ಳೆಯದಾಗುತ್ತದೆ. ರಾಯರ ಅನುಗ್ರಹವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ ಅಧ್ಯಕ್ಷ, ಅರ್ಚಕ ಪರಿಮಳಾಚಾರ್ಯರು ಪ್ರಾಸ್ತಾವಿಕ ಮಾತನಾಡಿ, 30 ವರ್ಷಗಳಿಂದ ರಾಘವೇಂದ್ರ ಸಪ್ತಾಹವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಪ್ರತಿ ಬಾರಿಯೂ ರಾಯರು ಸನ್ನಿಹಿತರಾಗಿ ಆಶೀರ್ವಾದ ಮಾಡುತ್ತ ಬಂದಿದ್ದಾರೆ ಎಂದು ತಿಳಿಸಿದರು.ಈ ಬಾರಿ ದಾವಣಗೆರೆಯಲ್ಲಿ ವಿಜೃಂಭಣೆಯಿಂದ ಮಹೋತ್ಸವ ನಡೆಯುತ್ತಿದೆ. ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಇದಕ್ಕೆ ದೊಡ್ಡ ಸಹಕಾರ ನೀಡಿದ್ದಾರೆ. ಗುರುರಾಯರ ಅನುಗ್ರಹ ಅವರ ಮೇಲಿದೆ. ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತಿ ಎರಡೂ ಮೇಳೈಸಿರುವುದು ಈ ಉತ್ಸವದ ವಿಶೇಷವಾಗಿದೆ. 7 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಈ ಭಾಗದ ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಮಂತ್ರಾಲಯ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟೃ್ನ ನಿರ್ದೇಶಕ ಕೆ. ಅಪ್ಪಣ್ಣಾಚಾರ್ಯರು, ಮಹೋತ್ಸವ ಸಮಿತಿ ಅಧ್ಯಕ್ಷ ಸಂಪನ್ನ ಮುತಾಲಿಕ್, ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್, ಸತ್ಯಬೋಧ ಕುಲಕರ್ಣಿ, ಡಾ.ಎಂ.ಸಿ. ಶಶಿಕಾಂತ್, ಎನ್.ಆರ್. ನಾಗಭೂಷಣ ರಾವ್, ಕೆ. ವಿಠ್ಠಲ್, ಅನಿಲ್ ರಾಮಧ್ಯಾನಿ ಇದ್ದರು. ಪಿ.ಆರ್. ಪ್ರಹ್ಲಾದರಾವ್ ನಿರೂಪಿಸಿದರು.