ಕೊಲೆ ಯತ್ನ:ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ
ಕಲಬುರಗಿ,ಮಾ 12: ಆಯುಧದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ್ದರಿಂದ ಅಪರಾಧಿಗೆ 1 ವರ್ಷ ಸಾದಾ ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ಇಲ್ಲಿನ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಅಳಂದ ಪಟ್ಟಣದ ಅನ್ಸಾರಿ ಮೊಹಲ್ಲಾ ನಿವಾಸಿ ರಾಜೀಕ್ ಲತೀಫ್ ಅನ್ಸಾರಿ ಶಿಕ್ಷೆಗೊಳಗಾದ ಅಪರಾಧಿ.
2020 ರ ಮೇ 26 ರಂದು ಅಳಂದ ಪಟ್ಟಣದಲ್ಲಿ ರಾಜೀಕ್ ಲತೀಫ್ ಅನ್ಸಾರಿ ಮತ್ತು ಸಂಗಡಿಗರು ವ್ಯಕ್ತಿಯೊಬ್ಬನಿಗೆ ಅಡ್ಡಗಟ್ಟಿ ದರ್ಗಾದ ನೌಬಾತ್ ವಿಷಯದಲ್ಲಿ ನಮ್ಮೊಂದಿಗೆ ಜಗಳಕ್ಕೆ ಬರುತ್ತೀಯಾ, ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಎಂದು ಅವಾಚ್ಯವಾಗಿ ಬೈಯ್ದು, ಚಾಕುವಿನಿಂದ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು.
ಅಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಾದ ವಿವಾದ ಆಲಿಸಿದ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ತೀರ್ಪು ನೀಡಿ ಆದೇಶಿಸಿದ್ದಾರೆ.ಸರಕಾರದ ಪರವಾಗಿ 3 ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.