ವ್ಯಕ್ತಿಯಿಂದ ಪತ್ನಿಯ ಅಜ್ಜಿಯ ಕೊಲೆ
ಚಿಂಚೋಳಿ,ಮಾ 12: ಕೌಟುಂಬಿಕ ಕಲಹದಿಂದ ಪತ್ನಿಯ ಅಜ್ಜಿಯನ್ನು ವ್ಯಕ್ತಿ ಕೊಲೆ ಮಾಡಿದ ಘಟನೆ ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.
ತಾಲೂಕಿನ ಭೀಮಾಹೊಸಳ್ಳಿ ಗ್ರಾಮದ ಮಮ್ತಾಜ್ ಬೇಗಂ ಅಬ್ದುಲ್ ರಜಾಕ್ ಕೊಲೆಯಾದ ಮಹಿಳೆ.ಕೊಲೆ ಆರೋಪಿ ಚಿಂಚೋಳಿಯ ಖಾಸಿಂ ಮಹಮ್ಮದ್ ಸಿದ್ದಕಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಮ್ತಾಜ್ ಬೇಗಂ ಮೊಮ್ಮಗಳನ್ನು ಖಾಸಿಂ ಮಹಮ್ಮದ್ ಸಿದ್ದಕಿಗೆ ಕೊಟ್ಟು ಮದುವೆ ಮಾಡಲಾಗಿತ್ತು.ಮದುವೆ ಆದ ಮೇಲೆ ಮನೆಯಲ್ಲಿ ಆಗಾಗ ಕಲಹ ನಡೆಯುತ್ತಿದ್ದವು. ಸೋಮವಾರ ಮಮ್ತಾಜ್‍ಬೇಗಂ ತಮ್ಮ ಊರಿನಿಂದ ಚಿಂಚೋಳಿಗೆ ಬಂದಾಗ ಬಸ್ ನಿಲ್ದಾಣದ ಬಳಿ ಖಾಸಿಂ ಜೊತೆ ಜಗಳವಾಗಿದೆ.ಆಗ ಖಾಸಿಂ ಕೈಯಿಂದ ತಲೆಗೆ ಹೊಡೆದಾಗ ಮಮ್ತಾಜ್ ಸಾವು ಸಂಭವಿಸಿದೆ.ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.