ಗ್ಯಾರಂಟಿ ಸಮಾವೇಶ,1,330 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ:ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ,ಮಾ.12: ಕಲಬುರಗಿ ನಗರದ ಎನ್.ವಿ. ಮೈದಾನದಲ್ಲಿ ಇದೇ ಮಾ.13 (ಬುಧವಾರ) ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಮತ್ತು 1,330 ಕೋಟಿ ರೂ. ಮೊತ್ತದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಂಗಳವಾರ ಇಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದರು.
ಬೇಸಿಗೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಗೆ ಕುಡಿಯುವ ನೀರು ಬಿಡುಗಡೆ ಕುರಿತಂತೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ಇದೂವರೆಗೆ ಅಲ್ಲಿನ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪತ್ರಿಕಾಗೋಷ್ಠಿಗೆ ಬರುವ ಮುನ್ನ ಸಹ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಇದೇ ವಿಷಯದ ಕುರಿತು ಚರ್ಚಿಸಿರುವೆ. ಇಂದು ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಮೂರು ತಿಂಗಳಿನಿಂದ ನರೇಗಾ ಕೂಲಿ ಹಣ ಕಾರ್ಮಿಕರಿಗೆ ಪಾವತಿಯಾಗಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕೇಂದ್ರ ಸರ್ಕಾರದಿಂದ ಕಳೆದ 6 ತಿಂಗಳಿನಿಂದ ಕೂಲಿ ಕಾರ್ಮಿಕರಿಗೆ ವೇತನಾನುದಾನ ನೀಡಿಲ್ಲ. ಸುಮಾರು 1,200 ಕೋಟಿ ರೂ. ಅನುದಾನ ಬರಬೇಕಿದೆ. ನರೇಗಾ ಯೋಜನೆಯಡಿ ಅಗತ್ಯ ಸಲಕರಣೆಗಳ ಖರೀದಿಗೆ, ಆಡಳಿತಾತ್ಮಕ್ಕ ವೆಚ್ಚಕ್ಕೂ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ:
ವಿರೋಧ ಪಕ್ಷದವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾನೂನು ವಿರೋಧಿ ಚಟುವಟಿಕೆ ನಡೆಸಿದವರನ್ನು ಜೈಲಿಗೆ ಕಳುಹಿಸುವುದು, ಗಡಿಪಾರು ಮಾಡುವುದು ತಪ್ಪಾ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ಜನತೆ ಮತ್ತು ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕಾನೂನು ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ರಕ್ಷಿಸುವ ಪ್ರಶ್ನೆಯೇ ಇಲ್ಲ. ಜಿಲ್ಲೆಯಲ್ಲಿ ಲಾ & ಆರ್ಡರ್ ಎಲ್ಲಿಯೂ ಕುಸಿತವಾಗಿಲ್ಲ. ಕಳೆದ ವರ್ಷ ಹಿಂದಿನ ಸರ್ಕಾರದ ಅವಧಿಯಲ್ಲಿ ಮಹಾಶಿವರಾತ್ರಿ ದಿನದಂದು ಆಳಂದನಲ್ಲಿ ಅಹಿತಕರ ಘಟನೆ ನಡೆದಿತ್ತು, ಆಗ ಲಾ & ಆರ್ಡರ್ ಕುಸಿತವಾಗಿತ್ತು. ಈ ವರ್ಷ ಹಾಗಾಗಿಲ್ಲ. ಕಾರಣ ನಮ್ಮ ಸರ್ಕಾರ ಉತ್ತಮ ಭದ್ರತೆ ವ್ಯವಸ್ಥೆ ಕಲ್ಪಿಸಿದಕ್ಕೆ ಯಾವುದೇ ಕಹಿ ಘಟನೆಗೆ ಸಾಕ್ಷಿಯಾಗಿಲ್ಲ. ಇದು ಇಲ್ಲಿನ ಲಾ & ಆರ್ಡರ್ ಸ್ಥಿತಿಗತಿ ಬಗ್ಗೆ ಸ್ಪಷ್ಟವಾಗಿ ಸೂಚಿಸುತ್ತದೆ ಎಂದರು.