ಉಪ್ಪಿನ ಬೆಟಗೇರಿ ಶ್ರೀಗಳಿಗೆ ಹಾರಕೂಡ ಶ್ರೀಗಳಿಂದ ಸತ್ಕಾರ
ಬೀದರ್: ಮಾ.12:ವರ್ಷದ 12 ತಿಂಗಳು ಜಾಗೃತಿ ಜಾತ್ರೆ ನಡೆಯುವಂತಹ ಪುಣ್ಯ ಕ್ಷೇತ್ರವನ್ನು ಬಸವ ನೆಲದಲ್ಲಿ ಕಾಣುವುದಾದರೆ ಅದು ಹಾರಕೂಡ ಸುಕ್ಷೇತ್ರ.
ಜ್ಞಾನ, ಧ್ಯಾನ, ಜಪಾತಪ, ಪ್ರಶಸ್ತಿ ಪ್ರದಾನ, ಪುರಸ್ಕಾರ, ಸತ್ಕಾರ, ಆಶೀರ್ವಾದ, ಶಿವಾನುಭೂತಿ ಹೀಗೆ ನೂರಾರು ಸಮಾಜಮುಖಿ ಕಾರ್ಯಗಳು ನಿತ್ಯ ನಿರಂತರವಾಗಿ ನಡೆಯುವ ಕ್ರಿಯಾಶೀಲ ಮಠವೊಂದು ಕಾಣುವುದಾದರೆ ಅದು ಹಾರಕೂಡ ಮಠ ಎಂದು ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಜರುಗಿದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರ 624ನೇ ತುಲಾಭಾರ ಕಾರ್ಯಕ್ರಮದ ದಿವ್ಯ ನೇತ್ರತ್ವ ವಹಿಸಿ ಮಾತನಾಡಿದ ಶ್ರೀಗಳು, ಪೂಜ್ಯ ಚನ್ನವೀರ ಶಿವಾಚಾರ್ಯರು ಲೋಕಕಲ್ಯಾಣಕ್ಕಾಗಿ ಅವತರಿಸಿದ ಮಹಾಂತರು.
ಅವರಲ್ಲಿನ ಮಾತೃ ವಾತ್ಸಲ್ಯ ಅನುಕರ ಕಾಣೀಯವಾದುದು, ಬಡ, ನೀರ್ಗತಿಕ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುತ್ತಿರುವುದು ಅವರ ಸಾಮಾಜಿಕ ಕಳಕಳಿಗೆ ದೊಡ್ಡ ನಿದರ್ಶನವಾಗಿದೆ.
ಮಠವನ್ನು ಭೌತಿಕವಾಗಿ ಸುಂದರಗೊಳಿಸುವುದರ ಜೊತೆಗೆ ಭಕ್ತರ ಮನೋ ಮಂದಿರದ ಭಾವ ಸೌಂದರ್ಯವನ್ನು ವೃದ್ಧಿಸುವಲ್ಲಿ ಸಾರ್ಥಕತೆ ಕಂಡಿರುವ ಪೂಜ್ಯ ಚನ್ನವೀರ ಶ್ರೀಗಳು ಈ ಸಮಾಜದ ದೊಡ್ಡ ಆಸ್ತಿಯೇ ಸರಿ.
ಇಂತಹ ಶ್ರೇಷ್ಠ ಗುರುಗಳನ್ನು ಪಡೆದುಕೊಂಡಿರುವ ಶರಣ ನಾಡಿನ ಭಕ್ತರು ನಿಜವಾಗಿಯೂ ಧನ್ಯರು ಎಂದರು.
ಹಾರಕೂಡ ಶ್ರೀಮಠದಲ್ಲಿ ಪೂಜ್ಯರಿಂದ ಪಡೆದ ದರ್ಶನ ಆಶೀರ್ವಾದ ಅವಿಸ್ಮರಣೀಯ ಗಳಿಗೆಯಾಗಿ ಉಳಿಯಲಿದೆ, ಇದರಿಂದ ನಮಗೆ ತುಂಬಾ ಸಂತೋಷವಾಗಿದೆ ಎಂದು ನುಡಿದು, ಎಲ್ಲರಿಗೂ ಸನ್ಮಂಗಳವಾಗಲಿ ಎಂದು ಹಾರೈಸಿದರು.
ಸೂರ್ಯಕಾಂತ ಮಠ ಸ್ವಾಗತಿಸಿದರು.
ಪೂಜ್ಯ ಬಸವಲಿಂಗ ದೇವರು ನಿರೂಪಿಸಿದರು.
ಸಂಗೀತ ಕಲಾವಿದರಾದ ದೇವರಾಜ ಹಾಗೂ ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ವಿಠಲ ಹೂಗಾರ ವಂದಿಸಿದರು.