ರಾಜಕಾರಣ ಚುನಾವಣೆಗೆ ಸೀಮಿತವಿರಲಿ: ಸೋಮಣ್ಣ
ತುಮಕೂರು, ಸೆ. ೧೭- ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇಂದಿಲ್ಲಿ ಹೇಳಿದರು.
ನಗರದ ಹೊರವಲಯದ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ರಾಜಕೀಯ ಮಾಡುವುದು ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಅದನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಜನಪ್ರತಿನಿಧಿಗಳು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದ ಜನರ ಬದುಕು ಹಸನಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಹಳ್ಳಿಗಳ ಸರ್ವತೋಮುಖ ಪ್ರಗತಿಗೆ ಕಾರ್ಯೋನ್ಮುಖರಾಗಬೇಕು ಎಂದರು.
ದೇಶದ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನಸಾಮಾನ್ಯರು ಎಲ್ಲರೂ ಮುಂದಾಗಬೇಕು. ಆಗ ಮಾತ್ರ ಮಹಾತ್ಮಗಾಂಧಿಯವರ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಬೆಳಗುಂಬ ಪಂಚಾಯ್ತಿ ದತ್ತು
ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ ಗ್ರಾಮ ಪಂಚಾಯ್ತಿಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಸಚಿವ ಸೋಮಣ್ಣ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಬೆಳಗುಂಬ ಪಂಚಾಯ್ತಿ, ಸ್ವಾಂದೇನಹಳ್ಳಿ, ಗೂಳೂರು, ಹೆತ್ತೇನಹಳ್ಳಿ, ಹೆಗ್ಗೆರೆ ಈ ೫ ಪಂಚಾಯ್ತಿಗಳನ್ನು ಆಂದೋಲನವನ್ನಾಗಿ ಪರಿವರ್ತನೆ ಮಾಡುವ ಜತೆಯಲ್ಲಿ ಈ ಪಂಚಾಯ್ತಿಗಳನ್ನು ದತ್ತು ತೆಗೆದುಕೊಳ್ಳುವಂತೆ ಜಿ.ಪಂ. ಸಿಇಓಗೆ ಸೂಚನೆ ನೀಡಿದರು.
೫ ಪಂಚಾಯ್ತಿಗಳಲ್ಲಿ ತಿಂಗಳಿಗೆ ೨-೩ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಮನೆ ಬಾಗಿಲಿಗೆ ಹೋಗುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಬೇಕಾಗಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಸಾಮಾನ್ಯ ಜನರಿಗೆ ವೈಯುಕ್ತಿಕ ಶೌಚಾಲಯ, ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ.
೫೦:೫೦ರ ಅನುಪಾತದಲ್ಲಿ ಅನುದಾನ ಸಹ ಒದಗಿಸಲಾಗುತ್ತಿದೆ. ಆದರೆ ಯೋಜನೆಯ ಉಸ್ತುವಾರಿಯನ್ನು ರಾಜ್ಯ ಸರ್ಕಾರಗಳೇ ನೋಡಿಕೊಳ್ಳುತ್ತಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ. ಅವರ ಹುಟ್ಟುಹಬ್ಬವನ್ನು ಹಳ್ಳಿಗಾಡಿನ ಸ್ವಚ್ಛತೆಯೊಂದಿಗೆ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಒಬ್ಬ ಪಿಡಿಓ ಸಹಿ ಹೈಕೋರ್ಟ್ ಜಡ್ಜ್‌ಗೆ ಸಮಾನ. ಹಾಗಾಗಿ ಪಿಡಿಓಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಹಳ್ಳಿಗಳ ಸ್ವಚ್ಛತೆ, ಪ್ರಗತಿ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಹೊಣೆಗಾರಿಗೆ ಪಿಡಿಓಗಳ ಮೇಲೆ ಹೆಚ್ಚಿರುತ್ತದೆ ಎಂದು ಅವರು ಹೇಳಿದರು.
ಬೆಳಗುಂಬ ಗುರುಸಿದ್ದರಾಮೇಶ್ವರ ಭವನ ನಿರ್ಮಾಣಕ್ಕೆ ವೈಯುಕ್ತಿಕವಾಗಿ ೧೦ ಲಕ್ಷ ರೂ. ಅನುದಾನ ನೀಡುವುದಾಗಿ ಸಚಿವ ಸೋಮಣ್ಣ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ, ಜಿ.ಪಂ. ಸಿಇಓ ಜಿ. ಪ್ರಭು, ಕುಂಭಯ್ಯ, ಶಂಕರಣ್ಣ ಮತ್ತಿತರರು ಉಪಸ್ಥಿತರಿದ್ದರು.