ಮಹಿಳಾ ದಿನವೆಂದರೆ ಅದು ದುಡಿಯುವ ಮಹಿಳೆಯರ ಹೋರಾಟದ ದಿನ:ದೇವದಾಸ್
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.12: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ  ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನಿಂದ    ಜಂಟಿಯಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಹಮ್ಮಿಕೊಳ್ಳಲಾಯಿತು.
ಎಐಯುಟಿಯುಸಿ ಯ ಜಿಲ್ಲಾಧ್ಯಕ್ಷ ಎ.ದೇವದಾಸ್ ಅವರು ಮಾತನಾಡುತ್ತಾ “ಇಂದು ದೇಶದ ಆರ್ಥಿಕತೆಯ ಭಾರ ಹೊತ್ತಿರುವ ಅಸಂಘಟಿತ ವಲಯದ ಕೋಟ್ಯಂತರ  ದುಡಿಯುವ ಮಹಿಳೆಯರು ಅಸಹನೀಯ ವಾತಾವರಣದಲ್ಲಿ ದುಡಿಯುತ್ತಿದ್ದಾರೆ. ಆಶಾ, ಅಂಗನವಾಡಿ, ಬಿಸಿ ಊಟದಂತಹ ಸ್ಕೀಮ್ ಗಳಲ್ಲಿ, ಗಾರ್ಮೆಂಟ್ಸ್,ಆಸ್ಪತ್ರೆ,ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲ, ಅನಿಯಮಿತ ದುಡಿತವಿದ್ದರೂ ಕನಿಷ್ಠ ವೇತನ ಜಾರಿಯಾಗಿಲ್ಲ, ಹೆರಿಗೆ ರಜೆ, ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ಲೈಂಗಿಕ ಶೋಷಣೆ, ಬೈಗುಳ, ನಿಂದನೆ ಸರ್ವೇಸಾಮಾನ್ಯವಾಗಿವೆ. ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದ ದುಡಿಯುವ ಹೆಣ್ಣು ಮಕ್ಕಳ ಪರಿಸ್ಥಿತಿ!!
ಇಂತಹ ಪರಿಸ್ಥಿತಿಗೆ ಕಾರಣ ಇಂದು ನಮ್ಮನ್ನಾಳುವ ರಾಜಕೀಯ ಪಕ್ಷಗಳು ಈ ಬಂಡವಾಳಶಾಹಿ ವ್ಯವಸ್ಥೆಯ ಪರವಾಗಿ ತರುವ ನೀತಿಗಳು.ಒಂದು ಕಡೆ  ಸಂಪತ್ತನ್ನು ಸೃಷ್ಟಿ ಮಾಡುವ ಕಾರ್ಮಿಕರು ನಿರ್ಗತಿಕರಾಗುತ್ತಿದ್ದಾರೆ ಇನ್ನೊಂದು ಕಡೆ ಭಾರತದ ಉದ್ಯಮಿಪತಿಗಳ ಹೆಸರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮಿಂಚುತ್ತಿವೆ. ಇಷ್ಟು ಅಸಮಾನತೆಯಿಂದ ಕೂಡಿರುವ ಈ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತುಹಾಕಿ ಎಲ್ಲಾ ಜನರಿಗೂ ನೆಮ್ಮದಿಯ ಬದುಕನ್ನು ನೀಡುವ ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ನೈಜ ಘನತೆ, ಗೌರವ ಮತ್ತು ಹಕ್ಕುಗಳನ್ನು ಖಾತ್ರಿಪಡಿಸುವ ಸಮಾಜವಾದಿ ವ್ಯವಸ್ಥೆಯನ್ನು ತರಬೇಕು. ಈ ಮಹತ್ ಗುರಿಗೆ ಎಲ್ಲಾ ದಮನಿತ ದುಡಿಯುವ ಜನತೆ ಸಿದ್ಧರಾಗಬೇಕು” ಎಂದು ಕರೆ ನೀಡಿದರು.
ಎಐಯುಟಿಯುಸಿ ಯ ಜಿಲ್ಲಾ ಉಪಾಧ್ಯಕ್ಷರಾದ ಎ.ಶಾಂತಾ ಅವರು ಮಾತನಾಡುತ್ತಾ “ಅಂದಿನ ಅಮಾನವೀಯ ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿ ಆಳ್ವಿಕರ ಗುಂಡಿನ ಏಟಿಗೆ ಹೆದರದೆ ಸಾವಿರಾರು ಹೆಣ್ಣು ಮಕ್ಕಳು ಹೋರಾಡಿದ್ದರ ಪ್ರತಿಫಲವಾಗಿ ಮತದಾನದ ಹಕ್ಕು, ತಾಯ್ತನದ ಸೌಲಭ್ಯಗಳು ,ರಾತ್ರಿ ಪಾಳಿ ನಿಷೇಧದಂತಹ ಹಲವಾರು ಹಕ್ಕುಗಳು ದುಡಿಯುವ ಮಹಿಳೆಯರಿಗೆ ದಕ್ಕಿದವು.
ಆದರೆ ಶೋಷಣೆಯನ್ನೇ ತನ್ನ ಮೂಲವಾಗಿಸಿಕೊಂಡಿರುವ ಈ ವ್ಯವಸ್ಥೆಯಲ್ಲಿ ಸಮಾನತೆಯ ಹೆಸರಿನಲ್ಲಿ ಮತ್ತೆ ರಾತ್ರಿ ಪಾಳಿಯನ್ನು ಜಾರಿಗೆ ತರುವಂತಹ ಮತ್ತು ದುಡಿತಾವಧಿಯನ್ನು ಹೆಚ್ಚಿಸುವ ಕಾನೂನುಗಳನ್ನು ನಮ್ಮ ಸರ್ಕಾರಗಳು ತರಲು ಹೊರಟಿವೆ. ಇಂತಹ ನೀತಿಗಳ ವಿರುದ್ಧ ಮಹಿಳಾ ಸಮುದಾಯ ಕಾರ್ಮಿಕ ವರ್ಗದ ಜೊತೆಗೂಡಿ ಹೋರಾಡಬೇಕಿದೆ. ಮಹಿಳಾ ವಿಮುಕ್ತಿಗೆ ಇದು ಮಾತ್ರವೇ ಸರಿಯಾದ ದಾರಿ.ಇದು ಈ ಘಳಿಗೆಯ ಅವಶ್ಯಕತೆ ಕೂಡ” ಎಂದು ಹೇಳಿದರು.
ಎಐಎಂಎಸ್ಎಸ್ ನ ಜಿಲ್ಲಾ ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ” ಅಂತರರಾಷ್ಟ್ರೀಯ ಮಹಿಳಾ ದಿನವೆಂದರೆ ಅದು ದುಡಿಯುವ ಹೆಣ್ಣು ಮಕ್ಕಳ ಹೋರಾಟದ ದಿನ. 1908 ರ ಮಾರ್ಚ್ 8 ರಂದು ಅಮೆರಿಕದ ಜವಳಿ ಕಾರ್ಖಾನೆಯ 30 ಸಾವಿರ ಮಹಿಳಾ ಕಾರ್ಮಿಕರು ಅಂತಿನ ಪರಿಸ್ಥಿತಿಯ ವಿರುದ್ಧ ಹೋರಾಡಿ ರಕ್ತ ಹರಿಸಿದ ದಿನ. ಈ ದಿನದ ನೆನಪಿಗಾಗಿ ಸಮಾಜವಾದಿ ನಾಯಕಿಯಾದ ಕ್ಲಾರಾ ಜಟ್ಕಿನ್ ರವರು ಮಾರ್ಚ್ 8ನ್ನು ವಿಶ್ವದೆಲ್ಲೆಡೆ ಮಹಿಳಾ ದಿನವನ್ನಾಗಿ ಆಚರಿಸಲು ಕರೆ ನೀಡಿದರು.
ಈ ಕರೆಯ ಮೇರೆಗೆ ನಮ್ಮ ಎಐಎಂಎಸ್ಎಸ್ ಮಹಿಳಾ ಸಂಘಟನೆ ಮಹಿಳಾ ದಿನದ ನೈಜ ಇತಿಹಾಸವನ್ನು ಮಹಿಳಾ ಸಮುದಾಯಕ್ಕೆ ತಿಳಿಸಿ ಇಂದಿನ ಹಲವಾರು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಅವರನ್ನು ವೈಚಾರಿಕವಾಗಿ,ರಾಜಕೀಯವಾಗಿ ಮತ್ತು  ಸಾಂಸ್ಕೃತಿಕವಾಗಿ ಮೇಲೆತ್ತುವ ಮಹಾನ್ ಕೆಲಸ ಮಾಡುತ್ತಿದೆ. ಈ ಉದ್ದೇಶಕ್ಕೆ ಮಹಿಳಾ ಸಮುದಾಯ ಕೈಜೋಡಿಸಬೇಕು” ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಐಎಂಎಸ್ಎಸ್ ನ ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ವಿದ್ಯಾವತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಎಐಯುಟಿಯುಸಿ ಯ ಜಿಲ್ಲಾ ಕಾರ್ಯದರ್ಶಿಗಳಾದ ಡಾ.ಪ್ರಮೋದ್, ಸಂಘಟನೆಗಳ ಪದಾಧಿಕಾರಿಗಳಾದ ಪದ್ಮಾ, ಗಿರಿಜಾ,ಅಹಲ್ಯಾ,ಜಯಮ್ಮ,ನೀಲಮ್ಮ, ಓಬಳಮ್ಮ,ಪಾರ್ವತಮ್ಮ,ಹಾಗೂ ಹಲವಾರು ಬಡಾವಣೆ, ಹಳ್ಳಿಗಳಿಂದ ಬಂದ ಮಹಿಳೆಯರು ಉಪಸ್ಥಿತರಿದ್ದರು.