ವಿವಿಧ ಭಾಷೆಗಳ ಕುರಾನ್  ಧ್ವನಿ ಸುರುಳಿ ಬಿಡುಗಡೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.12: ಪವಿತ್ರ ರಂಜಾನ್ ಮಾಸ ಹಾಗು ಸಹೋದರ ದಿ.ರಸೂಲ್ ಬಾಷ ಅವರ ಜನ್ಮ ದಿನದ ಸ್ಮರಣಾರ್ಥ ಇಂದು ಪವಿತ್ರ ಕುರಾನ್ ನ ಅರಬ್ಬಿ- ಕನ್ನಡ, ಅರಬ್ಬಿ- ತೆಲುಗು, ಅರಬ್ಬಿ- ಇಂಗ್ಲೀಷ್, ಅರಬ್ಬಿ-ಉರ್ದು ಭಾಷೆಗಳ ಆಡಿಯೋ ಸುರುಳಿಯನ್ನು ಪೆನ್ ಡ್ರೈವ್ ಗಳಲ್ಲಿ ಬಿಡುಗಡೆ ಮಾಡಿರುವುದಾಗಿ ಮಾಜಿ ಮೇಯರ್, ಪಾಲಿಕೆ ಸದಸ್ಯ, ವಿಪಕ್ಷ ನಾಯಕ ಸಿ.ಇಬ್ರಾಹಿಂ ಬಾಬು ತಿಳಿಸಿದರು.
ನಗರದ ಇಂದಿರಾ ಸರ್ಕಲ್ ನಲ್ಲಿರುವ ಅವರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಿ  ಮಾತನಾಡಿದರು. ಈ ನಾಲ್ಕೂ ಭಾಷೆಗಳ ಜ್ಞಾನವುಳ್ಳವರು ಇಡೀ ಕುರಾನ್ ಅನ್ನು ತಮ್ಮ ಮಾತೃ ಭಾಷೆಯಲ್ಲಿ ಕೇಳಿಸಿಕೊಂಡು ಅರ್ಥೈಸಿಕೊಳ್ಳಬಹುದೆಂದರು.
ಆಡಿಯೋದಲ್ಲಿ  ಕುರಾನ್ ನ ಮೂಲ ಮಂತ್ರಗಳು, ಸ್ತೋತ್ರಗಳು ಅರಬ್ಬಿ ಭಾಷೆಯಲ್ಲಿ ಇದ್ದು, ಪ್ರತಿ ವಾಕ್ಯದ ನಂತರ ಆಯಾ ಭಾಷೆಗಳಲ್ಲಿ ಅರ್ಥವನ್ನು ತಿಳಿಸುವ ರೀತಿಯಲ್ಲಿ ಆಡಿಯೋ ತಯಾರಿಸಲಾಗಿದೆ. ಈ ಪೆನ್ ಡ್ರೈವ್ ಗಳನ್ನು ಉಚಿತವಾಗಿ ಹಂಚುತ್ತಿದ್ದೇವೆ. ಕಳೆದ ಹತ್ತು ವರ್ಷಗಳಿಂದ ಕುರಾನ್ ನ ವಿವಿಧ ಭಾಷೆಗಳ ಅವತರಣಿಕೆಗಳ ಮುದ್ರಿತ ಗ್ರಂಥಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚುತ್ತ ಬಂದಿದ್ದೇವೆ ಎಂದರು.
ಈ ಪೆನ್ ಡ್ರೈವ್ ಗಳನ್ನು ವಿಶೇಷವಾಗಿ ಮುಸ್ಲಿಮೇತರರಿಗೆ ಹಂಚಲಾಗುವುದು. ಆಸಕ್ತರು ಇದರ ಲಾಭ ಪಡೆಯಬೇಕೆಂದು ಇಬ್ರಾಹಿಂಬಾಬು ಮನವಿ ಮಾಡಿದರು.
ಕಲ್ಯಾಣ ಸಂಸ್ಥಾನ ಮಠದ ಕಲ್ಯಾಣ ಸ್ವಾಮೀ,  ಫಾದರ್ ಐವಾನ್ ಪಿಂಟೋ,  ಗುಲಾಂ ಮೊಹಮ್ಮದ್ ಸಿದ್ದಿಕಿ ಖಾಜಿ ಮತ್ತು  ಸ್ವಾಮಿ ಕೃಷ್ಣ ಚಂದ್ರ ದಾಸ್ ಈ ವೇಳೆ ಇದ್ದರು,