ಚುನಾವಣೆ ಚಟುವಟಿಕೆಗಳ ಬಗ್ಗೆ ಕಣ್ಗಾವಲಿರಲಿ
ಧಾರವಾಡ, ಮಾ.12* ಚುನಾವಣಾ ಕಾರ್ಯ ಪ್ರತಿ ಸರಕಾರಿ ನೌಕರನಿಗೆ ಹೆಮ್ಮೆ ಮತ್ತು ಗೌರವ ತರುವ ಕರ್ತವ್ಯವಾಗಿದೆ. ತಾವು ನೇಮಕವಾಗಿ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಓದಿ, ಅಧ್ಯಯನ ಮಾಡಿ, ಅದರ ಸಂಪೂರ್ಣ ಅರಿವು ಹೊಂದಬೇಕೆಂದು ಜಿಲ್ಲಾ ಚುನಾವಣಾಧಿಕಾರಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ-2024ಕ್ಕೆ ಕರ್ತವ್ಯ ನಿರ್ವಹಿಸಲು ನೇಮಕವಾಗಿರುವ ಎಲ್ಲ ನೊಡಲ್ ಅಧಿಕಾರಿಗಳ, ಜಿಲ್ಲಾ ಚುನಾವಣಾ ಕಚೇರಿ ಸಿಬ್ಬಂದಿಗಳ ಮತ್ತು ವಿವಿಧ ತಂಡಗಳ ಮುಖ್ಯಸ್ಥರ ಸಭೆ ಜರುಗಿಸಿ, ಮಾತನಾಡಿದರು.
ಚುನಾವಣಾ ಕರ್ತವ್ಯ ಹೆಮ್ಮೆ ತರುವ ಕೆಲಸ. ಪ್ರತಿಯೊಂದು ಕಾರ್ಯಗಳು ಯಾವ ರೀತಿಯಲ್ಲಿ ಯಾವ ನಿಯಮಗಳಡಿ ಜರುಗಬೇಕು ಮತ್ತು ಯಾವ ಸುತ್ತೋಲೆ, ಮಾರ್ಗಸೂಚಿಸಿ, ನಿಯಮ, ಕಾಯ್ದೆಗಳು ಅನ್ವಯಿಸುತ್ತವೆ ಎಂಬುದನ್ನು ಪುಸ್ತಕ ಮಾಡಿ ಭಾರತ ಚುನಾವಣಾ ಆಯೋಗ ಈಗಾಗಲೇ ನೀಡಿದೆ. ಅದನ್ನು ಸರಿಯಾಗಿ ಅಧ್ಯಯನ ಮಾಡಬೇಕು ಮತ್ತು ಚುನಾವಣಾ ಸಂಬಂಧಿತ ಸಭೆ, ತರಬೇತಿಗಳಿಗೆ ನಿಯೋಜಿತರು ತಪ್ಪದೆ ಹಾಜರಾಗಬೇಕೆಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯು ಸುವ್ಯವಸ್ಥಿತವಾಗಿ ನಿಯಮಾನುಸಾರ ನಡೆಯಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ವಿವಿಧ ಕಾರ್ಯಗಳು ತ್ವರೀತವಾಗಿ ನಿಯಮಾನುಸಾರ ಜರುಗಿಸಲು ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಿ ಕಾರ್ಯ ಹಂಚಿಕೆ ಮಾಡಲಾಗಿದೆ. ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ತಿಳಿದುಕೊಂಡು, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಹಾಗೂ ಜನಪ್ರತಿನಿಧಿ ಕಾಯ್ದೆ, ನಿಯಮಗಳ ಅನುಸಾರ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ, ಉದಾಸೀನತೆ ತೋರಬಾರದು. ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಗಳನ್ನು ಮಾಡಲೇಬೇಕು. ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ಎಸ್.ಟಿ. ತಂಡಗಳಿಗೆ ಹಾಗೂ ಚೆಕ್‍ಪೊಸ್ಟ್‍ಗಳಿಗೆ ಬಂದಿಗೆ ನಿಯೋಜಿತರಾದವರು, ತಮಗೆ ನಿಗದಿ ಪಡಿಸಿದ ಸಮಯಕ್ಕೆ ಹಾಜರಾಗಿ, ಕರ್ತವ್ಯ ಮುಗಿಸಿದ ನಂತರ, ಮುಂದಿನ ತಂಡ ಹಾಜರಾದ ಮೇಲೆ ಹೋಗಬೇಕು ಎಂದು ತಿಳಿಸಿದರು.
ಚುನಾವಣಾ ವಿಷಯದಲ್ಲಿ ಕರ್ತವ್ಯದಿಂದ ಹೊರಗುಳಿಯಲು ಅಥವಾ ತಂಡದ ಬದಲಾವಣೆಗೆ ನೈಜ ಕಾರಣ, ತೊಂದರೆಗಳಿದ್ದರೆ ನೇರವಾಗಿ ಜಿಲ್ಲಾ ಚುನಾವಣಾ ಕಚೇರಿಗೆ ಬನ್ನಿ. ಇದು ಬಿಟ್ಟು ಬೇರೆಯವರಿಂದ ಶಿಫಾರಸ್ಸು, ಒತ್ತಡ ತರುವುದು ಅಥವಾ ಸಲ್ಲದ ನೆಪ ಹೇಳುವುದು ಕಂಡು ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿ, ನೇರವಾಗಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸರಕಾರಿ ನೌಕರರು ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕು. ತಮಗೆ ವಹಿಸಿದ ಕಾರ್ಯಗಳನ್ನು ನಿಯಮಾನುಸಾರ ಪಾರದರ್ಶಕವಾಗಿ ಮಾಡಬೇಕು, ರಾಜಕೀಯ ಚಟುವಟಿಕೆಗಳಿಂದ ದೂರವಿರಬೇಕು, ಪಕ್ಷ ಪ್ರಚಾರದಲ್ಲಿ ತೊಡಗಿರುವ ಬಗ್ಗೆ ಅಥವಾ ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಬಗ್ಗೆ ಸಿಬ್ಬಂದಿ ಅಥವಾ ಅಧಿಕಾರಿಗಳ ಮೇಲೆ ದೂರು ಬಂದರೆ, ತಕ್ಷಣ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಸಾರ್ವಜನಿಕರ, ವಿವಿಧ ಸೇವೆ ಪೂರೈಸುವ ಸಂಘ ವ್ಯಕ್ತಿಗಳಿಗೆ ಅನ್ವಯಿಸುವ ಚುನಾವಣಾ ನಿಯಮಗಳ ಬಗ್ಗೆ ತಿಳಿಸಲು ಸಭೆ ಆಯೋಜಿಸಬೇಕು. ಈ ಕುರಿತು ಕ್ರಿಯಾಯೋಜನೆ ರೂಪಿಸಲು ಅವರು ಹೇಳಿದರು.
ಎಲ್ಲರೂ ಸೇರಿ ಯಶಸ್ವಿಯಾಗಿ ನಿಯಮಾನಸಾರ ಮತ್ತು ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಚುನಾವಣೆ ಜರುಗಿಸೋಣ. ತಮ್ಮ ಕರ್ತವ್ಯಗಳಿಗೆ ಬದ್ಧರಾಗಿ, ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವೇದಿಕೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ ಎಸ್., ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮೊನಾ ರಾವುತ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಇದ್ದರು.
ಸಭೆಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಜಿಲ್ಲೆಯ ಹಿರಿಯ ಅಧಿಕಾರಿಗಳು, ಆರ್.ಓ.ಗಳು, ಎ.ಆರ್.ಓ ಗಳು, ವಿವಿಧ ತಂಡಗಳ ಮುಖ್ಯಸ್ಥರು, ಜಿಲ್ಲಾ ಚುನಾವಣಾ ಕಾರ್ಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.