ತಹಶೀಲ್ದಾರರಿಂದ ಬರಸ್ಥಿತಿ ಪರಿಶೀಲನೆ
ಹುಬ್ಬಳ್ಳಿ,ಮಾ12 : ಇಂದು ತಾಲೂಕಿನ ಪಾಲಿಕೊಪ್ಪ ಗ್ರಾಮಕ್ಕೆ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ಹೊಳೆಪ್ಪಗೋಳ ಅವರು ಭೇಟಿ ನೀಡಿ, ಬರಗಾಲದ ನಿಮಿತ್ತವಾಗಿ ಕುಡಿಯುವ ನೀರು, ಮೇವು ಲಭ್ಯತೆ ಹಾಗೂ ಇತರೇ ಸಮಸ್ಯೆಗಳ ಕುರಿತು ಪರೀಶೀಲನೆ ನಡೆಸಿದರು.
ಹುಬ್ಬಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿವೆ. ಕೆಲವು ಕಡೆಗಳಲ್ಲಿ ಕೆರೆಗಳಲ್ಲಿ ಸಹ ನೀರಿನ ಕೊರತೆಯಿದೆ. ಈಗಾಗಲೇ ಇರುವಂತಹ ಕುಡಿಯುವ ನೀರಿನ ಮೂಲಗಳಾದ ಕೊಳವೆ ಬಾವಿ, ಬಾವಿ, ಕೆರೆಗಳಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿವೆ. ತಾಲೂಕು ಆಡಳಿತದಿಂದ ಬಾಡಿಗೆ ರೂಪದಲ್ಲಿ ಖಾಸಗಿ ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಹ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಬೇಸಿಗೆ ಕಾಲದಲ್ಲಿ ದನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಬಹುದಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಮೇವಿನ ಕೊರತೆ ಬಗ್ಗೆ ವರದಿಯಾಗಿರುವುದಿಲ್ಲ. ಅಲ್ಲದೇ ಮೇವಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು, ಮೇವು ಬ್ಯಾಂಕ್‍ಗಳ ಮೂಲಕ ಮೇವು ಪೂರೈಸಲಾಗುವುದು. ಸಾರ್ವಜನಿಕರು ಯಾವುದೇ ಹಿಂಜರಿಕೆ ಮನೋಭಾವಯನ್ನು ಹೊಂದದೇ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು. ಆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಬರ ಪರಿಸ್ಥಿತಿಯ ಬಗ್ಗೆ ಗ್ರಾಮಸ್ಥರೊಂದಿಗೆ ವಿವರವಾಗಿ ಚರ್ಚಿಸಲಾಯಿತು.
ಗ್ರಾಮ ಪಂಚಾಯತ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.