ಬೇಸಿಗೆ ಕಾಲದಲ್ಲಿ ಆರೋಗ್ಯ ಮುಂಜಾಗ್ರತೆ ವಹಿಸಿ
ಕಲಬುರಗಿ:ಮಾ.12: ಪ್ರಸ್ತುತ ವರ್ಷ ಹಿಂದೆಂದಿಗಿಂತ ಹೆಚ್ಚಿನ ಉಷ್ಣಾಂಶವಿದ್ದು, ಫೆಬ್ರವರಿ ತಿಂಗಳಿನಿಂದಲೇ ಬಿಸಿಲಿನ ತಾಪ ಹೆಚ್ಚಾಗಿದೆ. ಬೇಸಿಗೆ ದಿನಗಳಲ್ಲಿ ವಾತಾವರಣದ ಬದಲಾವಣೆಯ ಪರಿಣಾಮವು ಮಾನವನ ದೇಹದ ಮೇಲೆ ನೇರವಾಗಿ ಬೀರುತ್ತದೆ. ಆದ್ದರಿಂದ ಆರೋಗ್ಯದಲ್ಲಿ ಏರು-ಪೇರುಗಳಾಗುವದರಿಂದ ಪ್ರತಿಯೊಬ್ಬರು ಮುನ್ನೆಚ್ಚರಿಕೆಗಳನ್ನು ವಹಿಸಿಕೊಂಡು, ಬಿಸಿಲಿನಿಂದ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಬೇಸಿಗೆ ಮುಂಜಾಗ್ರತಾ ಕ್ರಮಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬೇಸಿಗೆ ದಿವಸಗಳಲ್ಲಿ ಉಷ್ಣಾಂಶದ ಹೆಚ್ಚಾಗಿರುವದರಿಂದ ಬೆವರಿನ ಉತ್ಪಾದನೆಯ ಪ್ರಮಾಣ ಜಾಸ್ತಿಯಾಗಿರುತ್ತದೆ. ಆಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ದೇಹ ಬಿಸಿಯಾಗುತ್ತದೆ. ಆದ್ದರಿಂದ ಆಗಾಗ್ಗೆ ಸ್ವಲ್ಪ-ಸ್ವಲ್ಪ ನೀರನ್ನು ಕುಡಿಯುತ್ತಿರಬೇಕು. ಬಿಸಲಿನಲ್ಲಿ ಸುತ್ತಾಡಬಾರದು. ಅನಿವಾರ್ಯವಿದ್ದಾಗ ತಿರುಗಾಡುವ ಸಮಯದಲ್ಲಿ ತಲೆ, ಮೈ-ಕೈಯನ್ನು ಬಿಳಿ ವಸ್ತ್ರದಿಂದ ರಕ್ಷಿಸಬೇಕು. ತಲೆನೋವು, ಆಮಶಂಕೆ, ಸುಸ್ತು, ಉಷ್ಣ ಗುಳ್ಳೆಯಂತಹ ಸಾಮಾನ್ಯ ಸಮಸ್ಯೆಗಳು ಉಂಟಾಗುತ್ತವೆ. ಆಗ ಅದರ ಬಗ್ಗೆ ಭಯ ಪಡದೆ, ಸೂಕ್ತ ಔಷಧ ಪಡೆಯಬೇಕು. ಶುದ್ಧ, ಸ್ವಚ್ಚವಾದ ನೀರು, ಆಹಾರ ಸೇವಿಸಬೇಕು. ಎಣ್ಣೆಯಲ್ಲಿ ಕರಿದ-ಹುರಿದ, ಘನ ಆಹಾರ ಸೇವನೆ ಬೇಡ. ನಿಯಮಿತವಾಗ ವಿಶ್ರಾಂತಿ ಪಡೆಯಬೇಕು. ತಂಪು ಪಾನೀಯಗಳ ಬದಲಾಗಿ ಎಳೆ ನೀರು, ನಿಂಬೆ, ಮಜ್ಜಿಗೆ ಸೇರಿದಂತೆ ವಿವಿಧ ಹಣ್ಣಿನ ರಸ ಸ್ವೀಕರಿಸಬೇಕೆಂದು ಅನೇಕ ಸಲಹೆ-ಸೂಚನೆಗಳು, ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನುರ್, ಗಂಗಾಜ್ಯೋತಿ, ರೇಶ್ಮಾ, ಸಂಗಮ್ಮ, ಮಂಗಲಾ, ಚಂದಮ್ಮ, ಚಮದ್ರಕಲಾ, ಅರ್ಚನಾ, ನಾಗಮ್ಮ, ಸಿದ್ರಾಮ ಸೇರಿದಂತೆ ಇನ್ನಿತರರಿದ್ದರು.