ಹೈನುಗಾರಿಕೆಯಿಂದ ರೈತರಿಗೆ ಆರ್ಥಿಕ ಬಲ
ಕೆಂಗೇರಿ,ಮಾ.೧೨: ಸಾಮಾಜಿಕ,ಆರ್ಥಿಕ ಪ್ರಗತಿ ಸಾಧಿಸಲು ಹೈನುಗಾರಿಕೆ ಪರ್ಯಾಯ ಉದ್ಯೋಗ ಮಾರ್ಗೋಪಾಯವಾಗಿದ್ದು ಆ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಟಿ ಸೋಮಶೇಖರ್ ತಿಳಿಸಿದರು.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಿವಾಸಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪರಸ್ಪರ ಸಹಕಾರ ನಂಬಿಕೆಯಿಂದ ಮಾತ್ರ ಸಹಕಾರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದ್ದು, ಸದಸ್ಯರು, ನಿರ್ದೇಶಕರು ಅಸಹಕಾರ ನೀಡಿದರೆ ಸಹಕಾರ ಸಂಘ,ಸಂಸ್ಥೆಗಳು ಏಳಿಗೆ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಸೌಲಭ್ಯಗಳನ್ನು ರೈತರಿಗೆ ನೀಡುವ ಮೂಲಕ ರೈತರ ಅಭ್ಯುದಯಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂದರು.ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತ ಕುಟುಂಬಗಳಿಗೆ ಹಾಲು ಒಕ್ಕೂಟದ ವತಿಯಿಂದ ರಿಯಾಯತಿ ದರದಲ್ಲಿ ಮೇವು, ಚಾಪ್ ಕಟ್ಟರ್, ಮ್ಯಾಟ್, ಕುಟುಂಬ ಸದಸ್ಯರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ಸೇರಿದಂತೆ ಅಗತ್ಯ ನೆರವು ಹಾಗೂ ಸಹಕಾರ ನೀಡಿ ಪ್ರೋತ್ಸಾಹಿಸಲಾಗುತ್ತಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶ್ರೀನಿವಾಸಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಮಾತನಾಡಿ ಹೈನುಗಾರಿಕೆಯಲ್ಲಿ ತೊಡಿಸಿಕೊಂಡಿರುವ ಕುಟುಂಬದ ಸದಸ್ಯರಿಗೆ ಹಾಲು ಒಕ್ಕೂಟದ ಜೊತೆಗೆ ತಾಯಿ-ಮಕ್ಕಳ ಕರುಳುಬಳ್ಳಿಯ ಸಂಬಂಧಗಳಿವೆ ಎಂದರು.ರೈತರ ಸರ್ವಾಂಗೀಣ ಅಭಿವೃದ್ಧಿಯೇ ಸಂಘದ ಮುಖ್ಯ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಂಘದ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕೆ.ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರ್. ಲಕ್ಷ್ಮಯ್ಯ ಮಾತನಾಡಿ ಗ್ರಾಮೀಣ ಪ್ರದೇಶದ ರೈತರ ಬದುಕು ಹಸನುಗೊಳ್ಳಲು ಮತ್ತು ನಿರ್ದಿಷ್ಟ ಆದಾಯ ಮೂಲವನ್ನು ಹೊಂದಿ ಜೀವನಕ್ರಮ ಉತ್ತಮಪಡಿಸಿಕೊಳ್ಳಲು ಹೈನುಗಾರಿಕೆ ಮಹತ್ವದ ಪಾತ್ರ ವಹಿಸಲಿದೆ ಎಂದರು. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಪಶುವೈದ್ಯಾಧಿಕಾರಿಗಳು ನೀಡುವ ಸಲಹೆ,ಸೂಚನೆ ಮಾರ್ಗದರ್ಶನದ ಮೇರೆಗೆ ಹಸುಗಳಿಗೆ ಮೇವುಗಳನ್ನು ನೀಡಿ ಪೋಷಿಸಿ ಆ ಮೂಲಕ ಗುಣಮಟ್ಟದ ಹಾಲು ಉತ್ಪಾದನೆ ಮಾಡಿ ಹಾಲು ಉತ್ಪಾದನಾ ಕೇಂದ್ರಗಳಿಗೆ ಸರಬರಾಜು ಮಾಡುವಂತೆ ಸಲಹೆ ನೀಡಿದರು.
ಮುಖ್ಯ ಕಾರ್ಯನಿರ್ವಾಹಕರು ಅರುಣ್ ಕುಮಾರ್ ಕೆ. ಎಲ್ .ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ. ಎನ್. ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯದ ಕೆ.ಆರ್ ಗೋವಿಂದರಾಜು, ಸಂಘದ ನಿರ್ದೇಶಕರಾದ ಸುರೇಶ್ ಆರ್, ಕೆಎಚ್ ಪಾರ್ವತಿ ದೇವಿ ಜಯಮ್ಮ, ಸ್ನೇಹಶ್ರೀ, ಕೆ ಆರ್. ಶ್ರೀನಿವಾಸ ಮೂರ್ತಿ ,ರಂಗನಾರಾಯಣಪ್ಪ,ಕೆ ಆರ್ ನಾಗರಾಜು, ರಮೇಶ್ ಆರ್ ಜಾರ್ಜ್ ಜೋಸೆಫ್ ವಿಲಿಯಮ್ ಮತ್ತಿತರರು ಉಪಸ್ಥಿತರಿದ್ದರು