ಸಿಎಂ ಆಗುವ ಅವಕಾಶ ಎಲ್ಲರಿಗೂ ಇದೆ: ಉನ್ನತ ಶಿಕ್ಷಣ ಸಚಿವ ಸುಧಾಕರ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.12:ಎಲ್ಲರಿಗೂ ಸಿಎಂ ಆಗುವ ಅವಕಾಶ, ಅರ್ಹತೆ ಇದೆ.ಸದ್ಯ ಸಿಎಂ ಆಗಿ ಸಿದ್ದರಾಮಯ್ಯ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.ದೊಡ್ಡ ಮೊತ್ತದ ಗ್ಯಾರಂಟಿ ಯೋಜನೆಗಳ ಮಧ್ಯೆ ಸರ್ಕಾರ ನಡೆಸುವುದು ಸುಲಭದ ಮಾತಲ್ಲ.ಸಂಪನ್ಮೂಲಗಳನ್ನು ಯಾವ ಯಾವ ರೂಪದಲ್ಲಿ ಶೇಖರಣೆ ಮಾಡಬೇಕೆಂಬುದನ್ನಾ ಸಾಬೀತು ಮಾಡುತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಸುಧಾಕರ ಹೇಳಿದರು.
ನಗರ ಹೊರ ವಲಯದ ತೊರವಿ ಬಳಿ ಇರುವ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗಿಯಾದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರು.ಸಿಎಂ ಸಿದ್ದರಾಮಯ್ಯ ಅವರಿಗೆ 15 ಬಜೆಟ್ ಗಳನ್ನು ಮಂಡನೆ ಮಾಡಿದ ಅನುಭವವಿದೆ.ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಸುಭದ್ರವಾಗಿದೆ.
ಆಸೆ ಆಕಾಂಕ್ಷೆಗಳಿರುವುದು ಸಹಜ.ಅಂತಹ ಪರಿಸ್ಥಿತಿ ಬಂದಾಗ ಅವಕಾಶ ಎಲ್ಲರಿಗೂ ಆಗುತ್ತದೆ ಎಂದರು.
ವಿಜಯಪುರದ ಮಹಿಳಾ ವಿವಿಯ ಮ್ಯಾನೇಜ್ಮೆಂಟ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ವಿಭಾಗದ ಹೆಚ್ ಓಡಿಯಿಂದ ಲೈಂಗಿಕ ಕಿರುಕುಳ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿದೆ.ಲೈಂಗಿಕ ಕಿರುಕುಳ ಕುರಿತು ವಿದ್ಯಾರ್ಥಿನಿ ದೂರು ನೀಡಿದ್ದಾರೆ.
ಈ ಕುರಿತು ವಿಶ್ವವಿದ್ಯಾನಿಲಯದ ಆಂತರಿಕ ದೂರು ಸಮಿತಿ ಎಲ್ಲಾ ಮಾಹಿತಿ ಸಂಗ್ರಹ ಮಾಡುತ್ತಿದೆ.
ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದರೆ ಖಂಡಿತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಈ ಆರೋಪವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ.
ತನಿಖಾ ವರದಿಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಪೆÇ್ರಫೆಸರ್ ಮಲ್ಲಿಕಾರ್ಜುನ ಕಿರುಕುಳ ನೀಡಿದ್ದರ ಕುರಿತು ತನಿಖೆ ಆಗುವವರೆಗೂ ಅಮಾನತು ಮಾಡಲು ಆಗಲ್ಲ.
ಕಾನೂನಿನಡಿ ಅವರಿಗೂ ಅವಕಾಶ ನೀಡಬೇಕಾಗುತ್ತದೆ. ತನಿಖೆಯಲ್ಲಿ ತಪ್ಪು ಕಂಡು ಬಂದರೆ ಕ್ರಮ ಗ್ಯಾರಂಟಿ ಎಂದು ಸಚಿವ ಸುಧಾಕರ ಸ್ಪಷ್ಟಪಡಿಸಿದರು.