ತೋಟದ ವಸತಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಆಗ್ರಹರೈತ ಸಂಘದ ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಅಥಣಿ: ಮಾ.12:ತಾಲೂಕಿನ ತೆಲಸಂಗ ಮತ್ತು ಅನಂತಪುರ ಹೋಬಳಿ ಮಟ್ಟದ ವಿವಿಧ ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ತೋಟದ ವಸತಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ, ಜಿಲ್ಲಾಡಳಿತ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಕೂಡಲೇ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಮಹಾದೇವ ಮಡಿವಾಳ ಆಗ್ರಹಿಸಿದರು.
ಅವರು ಸೋಮವಾರ ತಾಲೂಕಾ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಕೃಷ್ಣಾ ನದಿಯಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿದ್ದು, ಮಹಾರಾಷ್ಟ್ರದಿಂದ ಎರಡು ಟಿಎಂಸಿ ನೀರನ್ನು ನದಿಗೆ ಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಕೂಡಲೇ ಗೋಶಾಲೆಗಳನ್ನು ಆರಂಭಿಸಬೇಕು, ತೋಟದ ವಸತಿಗಳಿಗೆ ಟ್ಯಾಂಕರ್ ಗಳ ಮೂಲಕ ನೀರನ್ನು ಒದಗಿಸಬೇಕು ಎಂದು ತಾಲೂಕ ಅಧಿಕಾರಿಗಳನ್ನು ಒತ್ತಾಯಿಸಿದರು. ನಂತರ ಹೆಸ್ಕಾಂ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿ ದಿನದ ಏಳು ಗಂಟೆ ವಿದ್ಯುತ್ ನೀಡುವಂತೆ ಅಗ್ರಹಿಸಿದರು.
ಈ ಸಂದರ್ಭದಲ್ಲಿ ರಮೇಶ್ ಮಡಿವಾಳ, ಯಳಗೊಂಡ, ಪಿಂಟು ಕಬಾಡಗಿ, ದುಂಡಪ್ಪ ತನಂಗಿ, ಮೊಹಮ್ಮದ ಜಮಾದಾರ, ಪ್ರಕಾಶ್ ಜೋಶಿ, ಕಿರಣ್ ಮಸಾಲೆ, ಅಡಿವಪ್ಪ ಅಜೂರ, ಮುರಿಗೆಪ್ಪ ಹೊನವಾಡ, ಬಸಪ್ಪ ದೊಡವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.