ಮಹಿಳೆಯರು ಧೈರ್ಯವಾಗಿ ಮುನ್ನುಗಬೇಕು: ಸವಿತಾ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.12:- ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಧೈರ್ಯವಾಗಿ ಮುನ್ನುಗ್ಗಿದರೆ ಯಶಸ್ಸು ಖಂಡಿತಾ ದೊರೆಯುತ್ತದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಎಂ. ಸವಿತಾ ತಿಳಿಸಿದರು.
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆಯ ಸಹಯೋಗದೊಂದಿಗೆ ನಡೆದ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಂ.ಕೆ ಮಲ್ಲೇಶ್ ಮಾತನಾಡಿ ಗಂಡಸರಿಗೆ ಪ್ರತಿ ಹಂತದಲ್ಲಿಯೂ ಮಹಿಳೆಯರ ರಕ್ಷಣೆ ಬೇಕೆಂದು ತಿಳಿಸುತ್ತ ಬಾಲ್ಯದಲ್ಲಿ ತಾಯಿ ಯೌವ್ವನದಲ್ಲಿ ಮಡದಿ, ವೃದ್ದಾಪ್ಯದಲ್ಲಿ ನಮ್ಮನ್ನು ನಮ್ಮ ಹೆಣ್ಣು ಮಕ್ಕಳೆ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಆದ್ದರಿಂದ ಮಹಿಳೆಯರಿಲ್ಲದೆ ಪುರುಷರು ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.
ಯೂನಿಯನ್ ಬ್ಯಾಂಕಿನ ರೀಜಿನಲ್ ಮುಖ್ಯಸ್ಥರಾದ ಸುನಿಲ್ ವಿ.ಪಾಟೀಲ್ ಮಾತನಾಡಿ ಯೂನಿಯನ್ ಬ್ಯಾಂಕಿನಿಂದ ಮಹಿಳೆಯರಿಗೆ ಇರುವ ಯೋಜನೆಗಳ ಬಗ್ಗೆ ತಿಳಿಸುತ್ತ ಮಹಿಳೆಯರಿಲ್ಲದೆ ಜಗತ್ತು ಶೂನ್ಯವೆಂದು ತಿಳಿಸಿದರು.
ಸಮಾರಂಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾಧಿಕಾರಿ ಹೆಚ್.ಎಸ್. ಬಿಂದ್ಯಾ, ಯೂನಿಯನ್ ಬ್ಯಾಂಕಿನ ಸಿನಿಬಾ ಕುಮಾರಿ, ವಾರ್ಡನ್ ಸರಸ್ವತಿ, ಬ್ಯಾಂಕಿನ ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.