ನಕಲಿ ಏಜೆನ್ಸಿಗಳ ಮೂಲಕ ವಿದೇಶಗಳಿಗೆ ಕೆಲಸಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮಾ.‌‌೧೨;: ಹೆಚ್ಚು ಸಂಬಳ ನೀಡುತ್ತಾರೆಂಬ ಆಸೆಯಿಂದ ನಕಲಿ ಏಜೆನ್ಸಿಗಳ ಮೂಲಕ ವಿದೇಶಗಳಿಗೆ ಕೆಲಸಕ್ಕೆ ಹೋಗುವವರು ಎಚ್ಚರದಿಂದಿರಿ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ  ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ವಿಯಾಟ್ನಾಂ , ಕಾಂಬೋಡಿಯಾ ದೇಶಗಳಿಗೆ ರಾಜ್ಯದ ಅನೇಕರು ಹೋಗುತ್ತಿದ್ದಾರೆ, ಆದರೆ ಅಲ್ಲಿ ಸರಿಯಾದ ಕೆಲಸ, ಸಂಬಳ ಇಲ್ಲದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.ನಕಲಿ ಏಜೆನ್ಸಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ವಿದೇಶಗಳಿಗೆ ಕರೆದೊಯ್ಯುತ್ತಾರೆ, ಅಲ್ಲಿ ಕಡಿಮೆ ಸಂಬಳಕ್ಕೆ ತಾವು ಹೇಳಿದ ಕೆಲಸವನ್ನು ಮಾಡುವಂತೆ ಒತ್ತಡ ಹಾಕುತ್ತಾರೆ. ಕೆಲಸ ಮಾಡದವನ್ನು ಕತ್ತಲ ಕೋಣೆಗೆ ನೂಕುತ್ತಾರೆ. ಈ ರೀತಿ ಅನೇಕರಿಗೆ ಆಗುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದರು.ಸಾಗರದ ವ್ಯಕ್ತಿಯೊಬ್ಬರಿಗೆ ಇದೇ ರೀತಿ ಆಗಿದ್ದು, ನಮ್ಮ ಸಮಿತಿಯ ಗಮನಕ್ಕೆ ಬಂದಿದೆ. ಹೆಚ್ಚು ಸಂಬಂಳದ ಆಸೆಗೆ ಸರಿಯಾಗಿ ವಿಚಾರಿಸದೆ ವಿದೇಶಗಳಿಗೆ ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಈ ರೀತಿ ಸಮಸ್ಯೆಗೆ ಸಿಲುಕುವವರ ರಕ್ಷಣೆಗೆ ಅನಿವಾಸಿ ಭಾರತೀಯ ಸಮಿತಿ ಇದೆ. ಸಮಿತಿಯಿಂದ ಸೂಕ್ತ ಮಾಹಿತಿ ಪಡೆದು ವಿದೇಶಗಳಿಗೆ ಕೆಲಸಕ್ಕೆ ಹೋದಲ್ಲಿ ಆತಂಕ ಇರುವುದಿಲ್ಲ.ಸಮಸ್ಯೆಗೆ ಸಿಲುಕುವ ಬದಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಾಗೃತಿ ಮೂಡಿಸುವ ಕೆಲಸವನ್ನು ಸಮಿತಿ ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯಿಂದ ವಿವಿಧ ಆಫ್ರೀಕನ್ ದೇಶಗಳಿಗೆ ವ್ಯಾಪಾರಕ್ಕೆಂದು ತೆರಳುವ ಹಕ್ಕಿಪಿಕ್ಕಿ ಜನಾಂಗದ ಜನರು ಅನೇಕ ಬಾರಿ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ನಮ್ಮ ಸಮಿತಿಯಿಂದ ಅವರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಲಾಗಿದೆ.ಇಂತಹ ಸಮಸ್ಯೆಗಳು ಹೆಚ್ಚೆಚ್ಚು ಕಂಡು ಬರುವುದರಿಂದ ಇದಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಉದ್ದೇಶ ರಾಜ್ಯ ಸರ್ಕಾರಕ್ಕಿದೆ. ಅಲ್ಲದೇ ವಿಶ್ವದ ವಿವಿಧ ದೇಶಗಲ್ಲಿ  ಉದ್ಯೋಗಕ್ಕೆಂದು ನೆಲಸಿರುವ ಕನ್ನಡಿಗರನ್ನು ಸೇರಿಸಿ ಪ್ರವಾಸಿ ದಿವಸ್ ಆಚರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಅವರು ತಿಳಿಸಿದರು.ನಮ್ಮ ಊರು ನಮ್ಮ ನಾಡು ಯೋಜನೆ ಮೂಲಕ ವಿದೇಶದ ಕನ್ನಡಿಗರು ತಮ್ಮ ತಾಯ್ನಾಡಿನ ಏಳಿಗೆಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ ಎಂದರು.ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗಲೂ ಅನಿವಾಸಿ ಭಾರತೀಯರ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈಗಲೂ ಈ ಕ್ಷೇತ್ರದಲ್ಲಿ ದ್ದು ಅನಿವಾಸಿ ಭಾರತೀಯರಿಗಾಗಿ ಕೆಲಸ ಮಾಡುವ ಅವಕಾಶ ಪಡೆದಿದ್ದು, ತಮ್ಮ ಅಪಾರ ಅನುಭವ ಬಳಸಿ ಅನಿವಾಸಿ ಭಾರತಿಯರ ಯೋಗಕ್ಷೇಮಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಚಂದ್ರಭೂಪಾಲ್  ಮತ್ತಿತರರಿದ್ದರು.