ಗಡಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ : ಟಿ. ವೆಂಕಟೇಶ್
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೨:ಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಆಂಧ್ರ ರಾಜ್ಯದ ಗಡಿ ಭಾಗದಿಂದ ಜಿಲ್ಲೆಯೊಳಗೆ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗದಂತೆ ಕಡಿವಾಣ ಹಾಕಲು ಸಹಕಾರ ನೀಡುವಂತೆ ನೆರೆಯ ಆಂಧ್ರಪ್ರದೇಶ ರಾಜ್ಯದ ಶ್ರೀ ಸತ್ಯಸಾಯಿ ಜಿಲ್ಲೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದರು.ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಕೈಗೊಳ್ಳಬೇಕಿರುವ ಪ್ರಾಥಮಿಕ ಹಂತದ ಮುಂಜಾಗ್ರತಾ ಕ್ರಮಗಳ ಕುರಿತು ನೆರೆಯ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳು, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶೀಘ್ರದಲ್ಲಿಯೇ ಲೋಕಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದ್ದು, ಈ ಸಂದರ್ಭದಲ್ಲಿ ಚುನಾವಣೆ ಸಂಬಂಧ ಜರುಗಬಹುದಾದ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗುವುದು.  ಆಂಧ್ರಪ್ರದೇಶದ ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಗಡಿ ಪ್ರದೇಶ ಹಂಚಿಕೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ನೆರೆಯ ರಾಜ್ಯದಿಂದ ಈ ಜಿಲ್ಲೆಯೆಡೆಗೆ ಅಕ್ರಮವಾಗಿ ಮದ್ಯ, ವಿವಿಧ ಬಗೆಯ ಸಾಮಗ್ರಿಗಳ ಸಾಗಾಣಿಕೆ ಮಾಡುವುದು, ಕೆಲ ವ್ಯಕ್ತಿಗಳು ಜಿಲ್ಲೆಯೊಳಗೆ ಆಗಮಿಸಿ, ಚುನಾವಣೆಯ ಮೇಲೆ ಪ್ರಭಾವ ಬೀರುವಂತಹ ಸಾಧ್ಯತೆಗಳಿರುತ್ತವೆ.  ಹೀಗಾಗಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸುವ ಸಲುವಾಗಿ ಆಂಧ್ರದ ಗಡಿಯಲ್ಲಿ ಬರುವ ಚಳ್ಳಕೆರೆ ತಾಲ್ಲೂಕಿನ ನಾಗಪ್ಪನಹಳ್ಳಿ ಗೇಟ್.  ಹಿರಿಯೂರು ತಾಲ್ಲೂಕಿನ ಖಂಡೇನಹಳ್ಳಿ ಹಾಗೂ ಪಿ.ಡಿ. ಕೋಟೆ ಕ್ರಾಸ್ ಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ತೀವ್ರ ನಿಗಾ ವಹಿಸ ಲಾಗುವುದು.  ಅದೇ ರೀತಿ ಆಂಧ್ರಪ್ರದೇಶ ರಾಜ್ಯದ ಶ್ರೀ ಸತ್ಯಸಾಯಿ ಜಿಲ್ಲೆಯ ವ್ಯಾಪ್ತಿಯಲ್ಲಿಯೂ ಅಧಿಕಾರಿಗಳು ಸೂಕ್ತ ಪ್ರದೇಶದಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ, ಅಕ್ರಮವಾಗಿ ಅಲ್ಲಿಂದ ಮದ್ಯ ಸಾಗಾಣಿಕೆಯಾಗದಂತೆ ಹಾಗೂ ಮತದಾರರಿಗೆ ಹಂಚಿಕೆ ಮಾಡುವ ಸಲುವಾಗಿ ವಿವಿಧ ಸಾಮಗ್ರಿಗಳನ್ನು ಸಾಗಿಸದಂತೆ ನಿಗಾ ವಹಿಸಬೇಕು.  ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಹಾಗೂ ಚುನಾವಣೆಯ ಮೇಲೆ ಪ್ರಭಾವ ಬೀರದಂತೆ ಮಾಡಲು, ವಿಶೇಷ ನಿಗಾ ವಹಿಸಲು ಅಲ್ಲಿನ ಅಧಿಕಾರಿಗಳು ಕ್ರಮ ವಹಿಸಬೇಕು.  ಒಟ್ಟಾರೆ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ನೆರೆಯ ರಾಜ್ಯದ ಅಧಿಕಾರಿಗಳು ಇಲ್ಲಿನ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಕೋರಿದರು.ಇದಕ್ಕೆ ಪ್ರತಿಯಾಗಿ ಸ್ಪಂದಿಸಿದ ಶ್ರೀ ಸತ್ಯಸಾಯಿ ಜಿಲ್ಲೆಯ ಕಲೆಕ್ಟರ್ ಪಿ. ಅರುಣ್ ಬಾಬು ಅವರು, ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಲು, ಚಿತ್ರದುರ್ಗ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವಂತೆ ಆಂಧ್ರದಲ್ಲಿಯೂ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ಅಕ್ರಮ ಮದ್ಯ ಮತ್ತು ಸಾಮಗ್ರಿಗಳ ಸಾಗಾಣಿಕೆ ತಡೆಗೆ ತೀವ್ರ ನಿಗಾ ವಹಿಸಲಾಗುವುದು ಎಂದು ಹೇಳಿದರು.