ಕೋಲಿ ಸಮಾಜದ ಮೇಲಿನ ದೌರ್ಜನ್ಯ ಖಂಡಿಸಿ ಮಾ.15ರಂದು ಬೃಹತ್ ಪ್ರತಿಭಟನಾ ಮೆರವಣಿಗೆ
ಕಲಬುರಗಿ:ಮಾ.11: ಜಿಲ್ಲೆಯಲ್ಲಿ ಕೋಲಿ ಸಮಾಜದ ಮೇಲೆ ಹೆಚ್ಚುತ್ತಿರುವ ಕೊಲೆ, ದೌರ್ಜನ್ಯ, ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ, ಪ್ರಚೋದಿತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಖಂಡಿಸಿ ಮಾರ್ಚ್ 15ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಿ ಸಮಾಜವನ್ನು ಗುರಿಯಾಗಿರಿಸಿಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜದ ಮುಖಂಡರನ್ನು ಕೊಲೆ ಮಾಡುವ ಮೂಲಕ ಹೆದರಿಸುವ ತಂತ್ರ ರೂಪಿಸುತ್ತಿದ್ದಾರೆ. ಸಮಾಜದ ಯುವಕ ಗಿರೀಶ್ ಚಕ್ರ ಅವರಿಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೆಲವು ಯುವಕರಿಗೆ ಫುಸಲಾಯಿಸಿ ಕೊಲೆ ಮಾಡಿಸಲಾಗಿದ್ದು, ಅವರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ ಫೆಬ್ರವರಿ 26ರಂದು ಚೌಡಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೈಬಣ್ಣ ಜಮಾದಾರ್ ಅವರಿಗೆ ರಾತ್ರಿ 8-30ಕ್ಕೆ ದುಷ್ಕರ್ಮಿಗಳು ಹಿಂದಿಯಲ್ಲಿ ಮಾತನಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದೇ ರೀತಿ ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಶಿವಶರಣ್ ಜಮಾದಾರ್ ಅವರಿಗೆ ಕೊಲೆ ಮಾಡಲಾಗಿದೆ. ಜೇವರ್ಗಿ ತಾಲ್ಲೂಕಿನ ಮಂದೇವಾಲ್‍ದಲ್ಲಿ ವಿನಾಕಾರಣ ಪೋಲಿಸರು ಸೈಬಣ್ಣ ಕರ್ಜಗಿ ಎಂಬ ಯುವಕನಿಗೆ ಕಣ್ಣಿಗೆ ಪಟ್ಟಿಕಟ್ಟಿ ಗುಂಡು ಹಾರಿಸಲಾಗಿದೆ ಎಂದು ಅವರು ಆರೋಪಿಸಿದರು.
ನಿರಂತರವಾಗಿ ಒತ್ತಾಯಪೂರ್ವಕವಾಗಿ ಆತ್ಮಹತ್ಯೆಯಂತಹ ಪ್ರಕರಣಗಳು ಮುಂದುವರೆದಿವೆ. ಕಲಬುರ್ಗಿಯ ದೇವಾನಂದ್ ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ದೊರಕಿಸಲು 45 ದಿನಗಳವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳ ಮೇಲೆ ಕ್ರಮ ಹಾಗೂ ಆರೋಪಿಗಳನ್ನು ಬಂಧಿಸುವ ಕುರಿತು ಭರವಸೆ ನೀಡಿದರು. ಇಲ್ಲಿಯವರೆಗೆ ಅವರ ಭರವಸೆ ಈಡೇರಿಲ್ಲ. ಸಚಿವರು ಹೇಳುವುದೊಂದು, ಮಾಡುವುದೊಂದು ಮಾಡುತ್ತಿದ್ದಾರೆ. ಆ ಕುರಿತು ಸಮಾಜದ ಸ್ವಾಮಿಗಳು ಭೇಟಿ ಮಾಡಲು ಕೇಳಿಕೊಂಡರೂ ಸಹ ಇಲ್ಲಿಯವರೆಗೂ ಸಚಿವರು ಅವಕಾಶ ಕಲ್ಪಿಸಿಲ್ಲ. ಆದಷ್ಟು ಬೇಗನೇ ಬೇಡಿಕೆಗಳನ್ನು ಸಚಿವ ಖರ್ಗೆ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಡತೆಗನೂರಿನಲ್ಲಿ ಶರಣ ಬಿರಾದಾರ್, ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಗುಂಡಪ್ಪ ಮಗಿ, ಡಾ. ಅಜಯಸಿಂಗ್ ಅವರ ಮನೆಯಲ್ಲಿ ದೇವಪ್ಪ ನಾಟೀಕಾರ್ ಎಂಬ ಯುವಕನ ಕೊಲೆ ಮಾಡಿ ನೇಣು ಹಾಕಲಾಗಿದ್ದು, ಇಲ್ಲಿಯವರೆಗೂ ಸಹ ಪೋಲಿಸರು ಪ್ರಕರಣ ದಾಖಲಿಸಿಲ್ಲ. ಪೋಲಿಸ್ ಇಲಾಖೆ ಸಂಪೂರ್ಣ ದುರ್ಬಳಕೆಯಾಗುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಸಾವಳಗಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೆಲೆ ಅತ್ಯಾಚಾರ, ಜೇವರ್ಗಿ ತಾಲ್ಲೂಕಿನ ಯಾತನೂರ್ ಬಾಲಕಿ ಮೇಲೆ ಅತ್ಯಾಚಾರ, ಕಲಗುರ್ತಿ ಯುವತಿ ಮೇಲೆ ಅತ್ಯಾಚಾರ ಮತ್ತು ಅಪಹರಣ, ಆಳಂದ್‍ದಲ್ಲಿ ಹಿಂದುಳಿದ ವರ್ಗದ ಕುರುಬ ಸಮಾಜದ ಯುವತಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ, ಚಿತ್ತಾಪುರ ತಾಲ್ಲೂಕಿನ ಹತ್ತನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅಪ್ರಚೋದಿತ ಆತ್ಮಹತ್ಯೆ ಪ್ರಕರಣಗಳೂ ಸೇರಿ ಸರಣಿ ಅತ್ಯಾಚಾರಗಳು ಜಿಲ್ಲೆಯಲ್ಲಿ ಆಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಎಲ್ಲ ಪ್ರಕರಣಗಳಿಂದ ಸಮಾಜದ ಜನರು ಭಯಭೀತರಾಗಿದ್ದಾರೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸುವುದರ ಜೊತೆಗೆ ಪರಿಣಾಮಕಾರಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾಕೇರಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಸಪ್ಪಣ್ಣಗೋಳ್, ಮಹಾರಾಯ್ ಅಗಸಿ, ಚಂದ್ರಕಾಂತ್ ಕಿರಸಾವಳಗಿ, ಸಾಯಬಣ್ಣಾ ಜಮಾದಾರ್, ಮಲ್ಲಪ್ಪ ಚಕ್ರ, ಸಂತೋಷ್ ಕೋಲಿ, ಶರಣು ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.