ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ನೂಕುವ ಸಂಸ್ಕøತಿ ಮಾರಕ
ಕಲಬುರಗಿ:ಮಾ.11: ಮನೆ, ಸಮಾಜಕ್ಕೆ ಹಿರಿಯರು,ವೃದ್ಧರು ಭಾರವಲ್ಲ. ಅವರು ತಮ್ಮ ಕುಟುಂಬ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿರುತ್ತಾರೆ. ಇಳಿವಯಸ್ಸಿನಲ್ಲಿ ವಯೋವೃದ್ಧರು ಭಾರವೆಂದು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. ಅವರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡುವ ಸಂಸ್ಕøತಿ ದೊಡ್ಡದಾಗಿದ್ದು, ಇದರ ಪಾಲನೆ ಅಗತ್ಯವಾಗಿದೆ ಎಂದು ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸಮೀಪವಿರುವ ‘ಸಂಜೀವಿನಿ ವೃದ್ಧಾಶ್ರಮ’ದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಯೋವೃದ್ಧರು, ಅನಾಥ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬುವ ‘ಅನಾಥರೊಂದಿಗೆ ನಾವು’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು..
ವೃದ್ಧಾಶ್ರಮದ ಮುಖ್ಯಸ್ಥ ಹಾಗೂ ಸಮಾಜ ಸೇವಕ ಶರಣು ಎ.ಕಮಠಾಣ ಮಾತನಾಡಿ, ಸ್ವಾರ್ಥ ಜೀವನ ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಕೆಲಸ ಮಾಡಬೇಕಾದರೆ ಲಾಭವಿದೆ ಎಂದು ನೋಡುವ ಪ್ರವೃತ್ತಿ ಹೆಚ್ಚಾಗಿರುವ ಪ್ರಸ್ತುತ ಸಂದರ್ಭದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗವು ಕಳೆದ 7 ವರ್ಷಗಳಿಂದ ಸಾವಿರಾರು ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಸಮಾಜ ಸೇವೆಯನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದು, ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಶಿವಪುತ್ರ ಮಾಲಿ ಪಾಟೀಲ, ಕಾಮಣ್ಣ ಮದಗುಣಕಿ, ಸುಭದ್ರಾ ಬಿರಾದಾರ, ಶರಣಮ್ಮ ತಳವಾರ, ರುಕ್ಮೀಣಿ ಪಾಟೀಲ, ಚಂದ್ರಕಲಾ, ಮಹಾದೇವಿ ಮರಗುತ್ತಿ, ರತ್ನಾಬಾಯಿ ಸೇರಿದಂತೆ ಮತ್ತಿತರರಿದ್ದರು.