ಸಿಎಂ-ಖರ್ಗೆ ಮೀಸಲಾತಿ ಕಲ್ಪಿಸುವ ವಿಶ್ವಾಸ: ಜಯಮೃತ್ಯುಂಜಯ ಶ್ರೀ
ಕಲಬುರಗಿ:ಮಾ.11:ಪ್ರಗತಿಪರ ವಿಚಾರಧಾರೆಯುಳ್ಳ ಸಿಎಂ ಸಿದ್ಧರಾಮಯ್ಯನವರು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾಯಿತಿಯ ಬೇಡಿಕೆ ಹಾಗೂ ಎಲ್ಲ ಲಿಂಗಾಯತ್ ಒಳಪಂಗಡಗಳಿಗೆ ಕೇಂದ್ರದಲ್ಲಿ ಒಬಿಸಿ ಮೀಸಲಾತಿಗೆ ಶಿಫಾರಸ್ಸು ಕೈಗೊಳ್ಳುವ ವಿಶ್ವಾಸವಿದೆ ಎಂದು ಕೂಡಲಸಂಗಮ ಪೀಠದ ಪಂಚಮಸಾಲಿ ದೀಕ್ಷ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಅವರು ಹೇಳಿದರು.
ಮಂಗಳವಾರ (ಮಾ.12ರಂದು) ಕಲಬುರಗಿ ಶ್ರೀಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ದೀಕ್ಷ ಪಂಚಮಸಾಲಿ ಪ್ರಥಮ ಐತಿಹಾಸಿಕ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಆಳಂದ ತಾಲೂಕು ಸುಕ್ಷೇತ್ರ ನವಕಲ್ಯಾಣ ಮಠ ಜಿಡಗಾ ಮಠದಲ್ಲಿ ಹಾಗೂ ತಂಬಾಕವಾಡಿ ಗ್ರಾಮದಲ್ಲಿ ಕರೆದ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ಮೊದಲೇ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಲಿಂಗಾಯತ್ ಒಳಪಂಡಗಳಲ್ಲಿ ಸಾಕಷ್ಟು ಬಡವರು ಮತ್ತು ಕಡು ಬಡವರಿದ್ದಾರೆ. ಇವರ ಮಕ್ಕಳಿಗೆ ಶೈಕ್ಷಣಿಕ ಮತ್ತು ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಲು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿಕೊಡಬೇಕು. ರಾಜ್ಯದಲ್ಲಿ ಪಂಚಮಸಾಲಿ ದೀಕ್ಷ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂಬ ಇನ್ನಿತರ ಬೇಡಿಕೆಗೆ ಸಮಾವೇಶ ನಡೆಯುತ್ತಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರ ಮಕ್ಕಳ ಭವಿಷ್ಯಕ್ಕಾಗಿ ಒಗ್ಗೂಡುವ ಕಾಲವಿದೆ. ಕೃಷಿಯೊಂದಿಗೆ ಅನೇಕ ಉಪ ಕಸುಬುಗಳೊಂದಿಗೆ ಸದಾ ಕ್ರಿಯಾಶಿಲರಾಗಿ ಕಾಯಕ ಮತ್ತು ದಾಸೋಹ ಪರಂಪರೆಯುಳ್ಳ ಲಿಂಗಾಯತರು ಎಲ್ಲರೊಂದಿಗೆ ಬೇರತು ಪ್ರೀತಿ ವಿಶ್ವಾಸದೊಂದಿಗೆ ಕನ್ನಡ ಭಾಷೆ ನಾಡಿನ ಸಂಸ್ಕøತಿ ಆರ್ಥಿಕತೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಆದರಿಗ ಕಾಲ ಬದಲಾದಂತೆ ಬದುಕು ದುಸ್ಥಿರವಾಗಿದ್ದು, ಸಾಮಾಜಿಕ ನ್ಯಾಯದಡಿ ಸಂವಿಧಾನದ ಚೌಕಟ್ಟಿನಲ್ಲಿ ಪಂಚಮಸಾಲಿ ಹಾಗೂ ಒಟ್ಟು ಲಿಂಗಾಯತರಿಗೆ ಮೀಸಲಾತಿಯು ಅನಿವಾರ್ಯವಾಗಿದೆ. ಇದು ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಸರ್ಕಾರ ಹಿಂದೇಟುಹಾಕುವುದು ಸರಿಯಲ್ಲ. ಮೀಸಲಾತಿ ಪಡೆಯುವತನಕ ಹೋರಾಟ ನಿಲ್ಲದು ಎಂದು ಅವರು ಎಚ್ಚರಿಸಿದರು.
ಸಮಾವೇಶದ ಸಿದ್ಧತೆಗಾಗಿ ವಿಭಾಗ ಮಟ್ಟದಲ್ಲಿ ಆಯ್ದ ಗ್ರಾಮಗಳಲ್ಲಿ ಮಾತ್ರ ಸಮಯದ ಅಭಾವದಿಂದಾಗಿ ಸಾಂಕೇತಿಕವಾಗಿ ಸಭೆ ನಡೆಸಲಾಗಿದೆ. ಆದರೆ ಇನ್ನೂಳಿದ ಹಳ್ಳಿಯವರು ಶ್ರೀಗಳು ಬಂದಿಲ್ಲವೆಂದು ಸಮಾವೇಶಕ್ಕೆ ಬಾರದೆ ಹಿಂದೇಟು ಹಾಕದೆ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಬೇಕು ಎಂದರು. ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಲಿಂಗಾಯತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಅಲ್ಲದೆ ಹೋರಾಟದ ರೂವಾರಿಗಳಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ಕಾಶಪ್ಪನವರು ಸೇರಿದಂತೆ ಶಾಸಕರು, ಮಾಜಿ ಶಾಸಕರು, ಸಚಿವರು ಮತ್ತು ಮಾಜಿ ಸಚಿವರು ಸೇರಿದಂತೆ ಅನೇಕ ಗಣ್ಯಮಾನ್ಯರುಗಳು ಪಂಚಮಸಾಲಿ ದೀಕ್ಷ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಭಾಗದಿಂದಲೂ ಬನ್ನಿ ಸಮಾವೇಶದಲ್ಲಿ ಪಾಲ್ಗೊಂಡು ಸಂಖ್ಯಾಬಲವನ್ನು ಪ್ರದರ್ಶಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ದೀಕ್ಷ ಪಂಚಮಸಾಲಿ ಸಮಾಜ ತಾಲೂಕು ಅಧ್ಯಕ್ಷ ಆನಂದ್ ಎಸ್. ದೇಶಮುಖ ಮಾತನಾಡಿ, ಕಲಬುರಗಿಯಲ್ಲಿ ನಡೆಯುವ ದೀಕ್ಷ ಪಂಚಮಸಾಲಿ ಐತಿಹಾಸಿಕ ಸಮಾವೇಶಕ್ಕೆ ತಾಲೂಕಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಳ್ಳಲಿದ್ದಾರೆ. ಈ ಕುರಿತು ಸರ್ಕೂಲರ ಹೊರಡಿಸಲಾಗಿದೆ ಎಂದು ಹೇಳಿದರು.
ಮುಖಂಡ ಶರಣಗೌಡ ಪಾಟೀಲ ದೇವಂತಗಿ, ನ್ಯಾಯವಾದಿ ಮಹಾದೇವ ಹತ್ತಿ ಮಾತನಾಡಿ, ಸಮುದಾಯದ ಹಕ್ಕಿನ ಬೇಡಿಕೆಗೆ ನಡೆಯುವ ಸಮಾವೇಶಕ್ಕೆ ಸರ್ವರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಜಿಡಗಾ ಗ್ರಾಮದ ಹಿರಿಯ ಕಲ್ಯಾಣರಾವ್ ಪಾಟೀಲ, ದೇವರಾಯ ಜವಳಿ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ಧರಾಮ ಯಾದವಾಡ, ಕಾಶಿನಾಥ ಪಾಟೀಲ, ರವಿ ಹಣಮಶೆಟ್ಟಿ, ರಾಹುಲ ಪಾಟೀಲ ಕೇರೂರ ಅನೇಕರಿದ್ದರು.