ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವಇನ್ನೂ 200 ಇಂದಿರಾ ಕ್ಯಾಂಟೀನ್ : ರಹೀಂ ಖಾನ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.17: ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ  ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ  ಪೌರಾಡಳಿತ ರಹೀಮ್ ಖಾನ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ. ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯಿಂದ ಪರೇಡ್ ವಂದನೆ ಸ್ವೀಕರಿಸಿದರು.
ನಂತರ ನಿಜಾಮರ ಆಡಳಿತದಿಂದ ಕಲ್ಯಾಣ ಕರ್ನಾಟಕ ವಿಮೋಚನೆಗೆ ಕಾರಣರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ  ಮಾತನಾಡಿದರು.
ಸಂವಿಧಾನದ 371 ಜೆ ಕಲಂ ನಡಿ ಕಲ್ಯಾಣ ಕರ್ನಾಟಕದ ಜನತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 80 ಮೀಸಲಾತಿ ದೊರೆಯುತ್ತಿದೆ. ಯುಜನತೆ ಉತ್ತಮ ವಿದ್ಯಾಭಾಸದ ಮೂಲಕ ಸದುಪಯೋಗ ಪಡೆಸಿಕೊಳ್ಳಬೇಕು.
ಬಳ್ಳಾರಿ ಉಪ ವಿಭಾಗದಲ್ಲಿ 165339 ಅಭ್ಯರ್ಥಿಗಳಿಗೆ 371 (ಜೆ) ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ ಇದರಿಂದಾಗಿ ಶಿಕ್ಷಣದಲ್ಲಿ ಹಾಗೂ ವಿವಿಧ ಇಲಾಖೆಗಳಲ್ಲಿ ಉದ್ಯೋಗದ ಮೀಸಲಾತಿಯನ್ನು ಪಡೆಯಲು ಅನುಕೂಲವಾಗಿದೆ.
ರಾಜ್ಯದಲ್ಲಿ ಬಡ ಜನತೆಗೆ ಮತ್ತಷ್ಟು ನೆರವಾಗುವಂತೆ 200 ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲಿದೆ.. ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಮೂರು ಸಾವಿರ ಕೋಟಿ ರೂ ನೀಡಿದ್ದು ಇದನ್ನು ಬರುವ ಡಿಸೆಂಬರ್ ಒಳಗೆ ಖರ್ಚು ಮಾಡಿದರೆ ಮತ್ತೆ ಐದು ಸಾವಿರ ಕೋಟಿ ರೂ ನೀಡಲಿದೆಂದು ಮುಖ್ಯ ಮಂತ್ರಿಗಳು ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಗೆ 1500 ಕೋಟಿ ರೂ ನೀಡಿದ್ದು ಇದರಡಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆಂದ ಅವರು ಬಳ್ಳಾರಿ ಎಂದರೆ ತುಂಬಾ ಶಾಂತಿಯುತವಾದ ನಗರ, ಉಕ್ಕಿನ ನಗರ, ಅಭಿವೃದ್ದಿನಗರ ಇಂತಹ ನಗರ ಸ್ವಚ್ಚನಗರವಾಗಬೇಕು ಅದಕ್ಕಾಗಿ ಹೆಚ್ಚಿನ ಹಣ ವೆಚ್ಚ ಮಾಡುತ್ತಿದೆಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ. 1582.92 ಕೋಟಿ ಅನುದಾನ ಹಂಚಿಕೆಯಾಗಿದ್ದು, ಒಟ್ಟು 5071 ಕಾಮಗಾರಿಗಳನ್ನು ಕೈಗೆತ್ತಿಕೊಂಡು 4396 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ರೂ.1252.83 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ ಬಾಕಿ ಉಳಿದ 620 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 07 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ 50 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ಭಾಗದ ಜನರಿಗಾಗಿ ‘ಶೇಕಡವಾರು 8% ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆಂದು ಹೇಳಿದರು.
ಸಂಸದ ಈ.ತುಕರಾಂ  ಮಾತನಾಡಿ ಕಲ್ಯಾಣ ಕರ್ನಾಕಟ ಮಂಡಳಿಯಿಂದ ಈ ಪ್ರದೇಶದ ನಗರ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ನಮಗೆ ದೊರೆತ ಅಧಿಕಾರ ಶಾಶ್ವತ ಅಲ್ಲ ನಾವು ಮಾಡಿದ ಕೆಲಸಗಳು ಹೆಸರು ಉಳಿಸುವಂತೆ ಆಗಬೇಕು.
ಸುಧಾ ಸರ್ಕಲ್ ರೈಲ್ವೇ ಪ್ಲೈ ಓವರ್ ಕಾಮಗಾರಿ ಆರಂಭಗೊಂಡಿದೆ. ಇನ್ನೊಂದು ವಾರದಲ್ಲಿ
ರೇಡಿಯೋ ಪಾರ್ಕ್ ನ ಎರಡನೇ ರೈಲ್ವೇ ಓವರ್ ಬ್ರಿಡ್ಜ್ ನ ಸಂಪರ್ಕ ಸೇತುವೆಯ ಕಾಮಗಾರಿ ಆರಂಭಿಸಲಿದೆ.  ಬರುವ ಒಂದು ವರ್ಷದಲ್ಲಿ ಮೋತಿ ಬ್ರಿಡ್ಜ್ ನ ಅಗಲೀಕರಣ ಮಾಡಲಿದೆ. ಸುಧಾಕ್ಅಸ್ ಗೆ ಚತುಷ್ಪತ ರಸ್ತೆ ಮಾಡಲಿದೆಂದು ಏರಿದ ಧ್ವನಿಯಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿರಿಗೇರಿ ಪನ್ನರಾಜ್  ಉಪನ್ಯಾಸ ನೀಡಿ, ಬಳ್ಳಾರಿಯ ಇತಿಹಾಸ ತಿಳಿಸುತ್ತ, ಆರು ವರ್ಷಗಳ ನಿಜಾಮರ ಆಡಳಿತದಲ್ಲಿದ್ದ ಬಳ್ಳಾರಿ, ನಂತರ   ಹೈದ್ರಾಬಾದ್ ಕರ್ನಾಟಕದ ಕಲ್ಬುರ್ಗಿ ವಿಭಾಗದಲ್ಲಿ ಸೇರಿದರ ಕುರಿತು ತಿಳಿಸಿದರು.
ಈ ಸಂಧರ್ಭದಲ್ಲಿ ಉತ್ಸವದ ಅಂಗವಾಗಿ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಮಹಾನಗರ ಪಾಲಿಕೆಯಿಂದ ಸ್ವಚ್ಚತಾ ಸೇವಾ ಬಗ್ಗೆ ಅರಿವು ಮೂಡಿಸುವ ಪ್ರದರ್ಶನ ಮತ್ತು ಆರೋಗ್ಯ ಇಲಾಖೆಯಿಂದ ಸಂಪೂರ್ಣತಾ ಅಭಿಯಾನದ ಅಂಗವಾಗಿ ಇಲಾಖೆಯ ಸೌಲಭ್ಯಗಳ ಬಗ್ಗೆ ತಿಳಿಸುವ ಮತ್ತು ಆರೋಗ್ಯ ಪರೀಕ್ಷೆ ಮಾಡುವ ಕಾರ್ಯ ನಡೆಯಿತು.
ಸಮಾರಂಭದಲ್ಲಿ  ಮೇಯರ್ ಮುಲ್ಲಂಗಿ ನಂದೀಶ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್,  ಪಾಲಿಕೆ ಸದಸ್ಯೆ
ಸುರೇಖ ಮಲ್ಲನಗೌಡ, ಹನುಮಂತಪ್ಒ ಕೆ, ಗುಡಿಗಂಟಿ ಹನುಮಂತ, ಮಾಜಿ ಡಿಸಿಸಿ ಅಧ್ಯಕ್ಷ ಜಿ.ಎಸ್. ಮಹಮ್ಮದ್ ರಫೀಕ್,
 ಜಿಲ್ಲಾ ಪಂಚಾಯ್ತಿ ಸಿಈಓ ರಾಹುಲ್ ಶರಣಪ್ಪ ಸಂಕನೂರು,  ಡಿಐಜಿ ಲೋಕೋಶ್, ಎಸ್ಪಿ ಡಾ.ಶೋಭಾರಾಣಿ,  ಎಡಿಸಿ ಮಹಮ್ಮದ್ ಜುಬೇರ ಮೊದಲಾದವರು ಪಾಲ್ಗೊಂಡಿದ್ದರು.
ಡಿ.ಕಗ್ಗಲ್ಲು ದೊಡ್ಡಬಸವ ಗವಾಯಿ ಅವರಿಂದ ನಾಡಗೀತೆ ಗಾಯನ, ಅಮಾತಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಸ್ವಾಗತಿಸಿದರು.