ಅಖಂಡತೆ ಹಾಗೂ ಅವಿಚ್ಛಿನ್ನತೆ ದೈವತ್ವದ ಗುಣಗಳು
ಕಲಬುರಗಿ: ಮಾ.11:ದೇವರು ಸತ್ಯ ಶಿವ ಸುಂದರನಾಗಿದ್ದಾನೆ. ಅವನು ಅಖಂಡ ಹಾಗೂ ಅವಿಚ್ಛಿನ್ನ ಗುಣವನ್ನು ಹೊಂದಿದ್ದಾನೆ. ಈ ಅಖಂಡತೆ ಮತ್ತು ಅವಿಚ್ಛಿನ್ನ ಗುಣಗಳನ್ನು ಅಳವಡಿಸಿಕೊಳ್ಳುವುದೆ ದೇವತಾರಾಧನೆಯ ಮೂಲ ಉದ್ದೇಶವಾಗಬೇಕು ಎಂದು ಶಿವಮೊಗ್ಗದ ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಕಲಬುರಗಿ ಹೊರವಲಯದಲ್ಲಿ ಶ್ರೀ ಗುರುದೇವ ಸೇವಾ ಸಂಸ್ಥೆಯವರು ನಿರ್ಮಿಸಿದ್ದ ಸಮಾಧಾನ ಧ್ಯಾನ ಮಂದಿರದಲ್ಲಿ 15 ನೇ ಅಖಂಡ ಶ್ರೀ ರುದ್ರಪಠಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಿದ್ದರು.
ದೇವರು ಖಂಡ ಖಂಡ ವಲ್ಲ. ಆತ ಅಖಂಡ. ಆತನನ್ನು ತುಂಡರಿಸಲು ಆಗದು. ಕಾರಣ ಆತ ಅನಂತ. ನಮ್ಮ ಮಾನವ ಕೈಗೆ ಆತ ಎಟುಕಲಾರ. ನಾವು ತುಂಡರಿಸಲು ಪ್ರಯತ್ನಿಸಿದರು ಅದು ಅಸಾಧ್ಯ. ಅವನನ್ನು ತುಂಡರಿಸುವ ಸಾಧನವೂ ಅಲಭ್ಯ.
ಹಾಗೆಯೇ ಆತ ಅವಿಚ್ಛಿನ್ನ. ಆತ ಛಿನ್ನ ನಲ್ಲ. ಆತ ವಿಶ್ವ ವ್ಯಾಪಕ. ವಿಶ್ವ ಮಧ್ಯ. ಛಿನ್ನ ಛಿನ್ನ ವಾದ ಈ ಪ್ರಪಂಚವು ಅತನ ಸೃಷ್ಟಿ. ಆದರೆ ಆತ ಮಾತ್ರ ಅವಿಚ್ಛಿನ್ನ ನಾಗಿಯೇ ಇದ್ದಾನೆ ಮತ್ತು ಹಾಗೆಯೇ ಇರುತ್ತಾನೆ.
ಇಂತಹ ಅಖಂಡ, ಅನಂತ, ಅಮಿತ, ಅಗಣಿತ, ಅವಿಚ್ಛಿನ್ನ ಭಗವಂತ ನನ್ನು ಒಲಿಸಲು ಹಲವಾರು ದಾರಿಗಳಿವೆ. ಹಾಗೆ ನಾವು ಆತನಲ್ಲಿ ಭಕ್ತಿ ಮಾಡಲು ಈ ಶ್ರೀ ರುದ್ರ ಹೆಚ್ಚು ಲಾಭದಾಯಕವಾಗಿದೆ. ಅದರಲ್ಲೂ ಅಖಂಡ ರುದ್ರ ಪಠಣ ಬಹು ಫಲಕಾರಿಯಾಗಿದೆ. ಇದು ಶೀಘ್ರದಲ್ಲಿಯೇ ಫಲ ನೀಡುವ ಸಾಧನ.
ಸಮಾಧಾನದಲ್ಲಿ ಯಾವುದೇ ಲಿಂಗಬೇಧವಿಲ್ಲದೆ ವೇದ ಪಠಣ ನಡೆಯುತ್ತಿರುವುದು ಸರ್ವಮಾನ್ಯವಾದ ಸಂಗತಿ. ಸುಮಾರು ಹದಿನೈದು ವರ್ಷಗಳಿಂದ ನಿರಂತರ ಪಠಣ ಮನಸ್ಸಿಗೂ ಹಾಗೂ ಶರೀರಕ್ಕೂ ಹಿತ ನೀಡುತ್ತದೆ.. ಎಲ್ಲರ ಭಕ್ತಿಯನ್ನು ನೂರ್ಮಡಿಗೊಳಿಸುತ್ತದೆ. ಈ ಪರಂಪರೆಯನ್ನು ಎಲ್ಲರೂ ಅನುಸರಿಸಬೇಕೆಂದರು.
ಸೇವಾ ಸಮಿತಿಯ ಸರ್ವ ಪದಾಧಿಕಾರಿಗಳು, ಮೌನ ತಪಸ್ವಿ ಗುರುಗಳ, ಸಮಾಧಾನದ ಸಕಲ ಸದ್ಭಕ್ತರು ಹಾಜರಿದ್ದರು.