ಮಣ್ಣಿನ ಆರೋಗ್ಯ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ: ಡಾ.ರಾಜು ತೆಗ್ಗಳಿ
ಮಾದನಹಿಪ್ಪರಗಿ: ಮಾ.11:ವಾತಾವರಣ ಮತ್ತು ಮಣ್ಣಿನ ಗುಣಧರ್ಮ ನೋಡಿ ಕೃಷಿ ಮಾಡಿರಿ. ಭೂಮಿ ಮೇಲಿನ ಪ್ರತಿ ಜೀವಿಗೂ ಮಣ್ಣು ನೀರು ಗಾಳಿ ಅವಶ್ಯ. ಪ್ರತಿ ಜೀವಕೋಶಗಳಿಗೆ ಮಣ್ಣಿನಲ್ಲಿರುವ ಪೋಷಕಾಂಶಗಳು ಬೇಕೆಬೇಕು. ಭೂತಾಯಿಯ ಆರೋಗ್ಯ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ರಾಜು ತೆಗ್ಗಳ್ಳಿ ಹೇಳಿದರು.
ಇಂದು ಇಲ್ಲಿಗೆ ಸಮೀಪದ ಚಲಗೇರಾ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯ ಪ್ರಣವ ಕುಟೀರದ ಜಾತ್ರಾ ಮಹೋತ್ಸವ ಹಾಗೂ ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಮಾದನಹಿಪ್ಪರಗಿಯ ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ, ಇವರ ಸಂಯುಕ್ತಾಶ್ರಯದಲ್ಲಿ ಜಲಸಂರಕ್ಷಣೆ ಮತ್ತು ಸಮಗ್ರ ಕೃಷಿ ನೀತಿ ಕುರಿತು ರೈತ ಮತ್ತು ಕೃಷಿ ವಿಜ್ಞಾನಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅತಿಯಾದ ರಸಾಯನಿಕ ಗೊಬ್ಬರ, ಅತೀ ನೀರು ಬಳಸುವದರಿಂದ ಮಣ್ಣಿನ ಆರೋಗ್ಯ ಹಾಳಾಗುತ್ತದೆ. ಮನುಷ್ಯರ ಹಾಗೆ ಮಣ್ಣಿಗೂ ಜೀವ ಇದೆ. ಮಳೆ ನೀರನ್ನು ಇಂಗಿಸುವದರಿಂದ ಅಂತರಜಲ ಹೆಚ್ಚಳವಾಗುತ್ತದೆ. ಗಿಡ ಮರಗಳನ್ನು ಬೆಳೆಸುವದರಿಂದ ಮಳೆ ನೀರನ್ನು ಸಂರಕ್ಷಣ ಮಾಡುತ್ತದೆ. ಹಳ್ಳ ಕೆರೆಗಳಿಗೆ ಸಣ್ಣಪುಟ್ಟ ಕಟ್ಟೆ ಕಟ್ಟಿಸಿ ನೀರು ಇಂಗುವಂತೆ ಮಾಡಬೇಕು. ರೈತರು ಮಣ್ಣು ಪರೀಕ್ಷೆ ಮಾಡಿಸಿ ಹೆಚ್ಚಿನ ಇಳುವರಿ ಪಡೆಯಬೇಕು ಎಂದರು. ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ಯುಸೂಫ್‍ಅಲಿ ನಿಂಬರಗಿ ಮಾತನಾಡಿ, ನೀರು ಬಳಕೆ ಮಾಡುವ ಕುರಿತು. ಡಾ,ಯಲ್ಲಪ್ಪ ಇಂಗಳೆ ಪಶುವೈಧ್ಯಾಧಿಕಾರಿಗಳು ಆಳಂದ ಹೈನುಗಾರಿಕೆ ಜಾನುವಾರುಗಳ ಆರೈಕೆ ಬಗ್ಗೆ ಮಾತನಾಡಿದರು. ಮಾದನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಸಹಾಯಕ ಅಧಿಕಾರಿ ಡಾ. ಹಣಮಂತ ಅಂಕದ ತೋಟಗಾರಿಕೆ ಬೆಳೆಗಳು ಅವುಗಳ ನಿರ್ವಹಣೆ ಮತ್ತು ನರೇಗಾ ಯೋಜನೆಯಡಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸುವುದು ಕುರಿತು ಸಮಗ್ರ ಮಾಹಿತಿ ನೀಡಿದರು. ಪ್ರಗತಿಪರ ರೈತ ಮಲ್ಲಿನಾಥ ನಿಂಬಾಳ, ಈ ದೇಶದ ರೈತರಿಗೆ ಯಾವುದೆ ಬೆಲೆ ಇಲ್ಲ. ಅವನು ಕಷ್ಟದಲ್ಲಿಯೇ ಬದುಕಿ ಕಷ್ಟದಲ್ಲಿ ಸಾಯುತ್ತ್ತಿದ್ದಾನೆ. ಆದರೆ ನಮ್ಮನ್ನಾಳುವ ಸರಕಾರಗಳು ದೊಡ್ಡ ದೊಡ್ಡ ಕಾರ್ಪೊರೇಟರ ಸಾಲ ಮನ್ನ ಮಾಡುತ್ತಾರೆ. ಆದರೆ ರೈತರ ಸಾಲ ಮನ್ನಾ ಮಾಡುವುದಿಲ್ಲ. ಇದರ ವಿರುದ್ದ ಒಗ್ಗಟ್ಟಾಗಿ ಧನಿ ಎತ್ತಬೇಕು ಎಂದರು. ಪ್ರಣವ ಕುಟೀರದ ಪೀಠಾಧ್ಯಕ್ಷ ಶಾಂತವೀರ ಶಿವಾಚಾರ್ಯರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಮರಳುಸಿದ್ದ ಸ್ವಾಮಿಗಳು ಪಡಸಾವಳಿ, ಪಂಚಾಕ್ಷರಿ ದೇವರು ಐನಾಪುರ, ರೈತರಾಧ ಮಲ್ಲಿಕಾರ್ಜುನ ಸಗುಮಳೆ, ರಾಜಕುಮಾರ ಪಾಟೀಲ, ಶಾಲಾ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಮಲ್ಲಿನಾಥ ಪರೇಣಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತ ಮಹಿಳೆ ನಾಗಮ್ಮ ಶಿವಯ್ಯ ಸ್ವಾಮಿ ಚಲಗೇರಾ, ಅಮೃತ ಕಾಶಪ್ಪ ಉಡಗಿ ಮಾ.ಹಿಪ್ಪರಗಿ, ರವಿಕುಮಾರ ನಂದೇಣಿ ನಿಂಬಾಳ ಸನ್ಮಾನಿಸಲಾಯಿತು. ಅಡವಯ್ಯ ಸ್ವಾಮಿ, ಪಂಚಯ್ಯ ಸ್ವಾಮಿ, ಗುಂಡೇರಾವ್ ದಿಂಡೂರೆ, ಹರಿದಾಸ ಹಜಾರೆ, ಮಹಾಂತೇಶ ಸಣಮನಿ, ಮಹಾನಂದ ನಂದಿಕೋಲ, ಶ್ರೀಶೈಲ ಮೇತ್ರೆ, ಶರಣಬಸಪ್ಪ ಕಣ್ಣಿ, ರಾಜು ಈಳಗೆ ಮುಂತಾದವರಿದ್ದರು.