ಜೀವಜಲ ಸಂರಕ್ಷಣೆ ಎಲ್ಲರ ಕರ್ತವ್ಯ
ಕಲಬುರಗಿ :ಮಾ.11: ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣವಾದ ಅಮೂಲ್ಯವಾದ ಸಂಪತ್ತು ಜಲ. ಇದು ನಮ್ಮೆಲ್ಲರ ಬಲವಾಗಿದೆ. ವಿವಿಧ ಕಾರಣಗಳಿಂದ ಜಲ ಸಂಪತ್ತಿನ ಕೊರತೆಯಿಂದ ಪರಿಸರದ ಅಸಮತೋಲನವಾಗುತ್ತಿದೆ. ಜಲ ಸಂರಕ್ಷಣೆ ಸರ್ಕಾರ, ಕೆಲವು ವ್ಯಕ್ತಿ, ಸಂಸ್ಥೆಗಳ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ನೀರನ್ನು ಮಲಿನ ಮಾಡದೆ ಸಂರಕ್ಷಣೆ ಮಾಡಬೇಕಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ಹೇಳಿದರು.
ಕಾಳಗಿ ತಾಲೂಕಿನ ಸುಕ್ಷೇತ್ರ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದ ಎದುರುಗಡೆಯಿರುವ ಬೆಣ್ಣೆತೊರೆ ಜಲಾಶಯದ ದಡದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಜಲ ಸಂರಕ್ಷಣಾ ಜಾಗೃತಿ’ಯಲ್ಲಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಜಲಸಂಪತ್ತು ಹಾಳಾಗದಂತೆ ತಡೆದು, ಅದನ್ನು ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕಾಗಿದೆ. ಭೂಮಂಡಲದಲ್ಲಿ ಒಟ್ಟು ಬಳಕೆಗೆ ಲಭ್ಯತೆಯ ನೀರಿನ ಪ್ರಮಾಣ ತುಂಬಾ ಕಡಿಮೆಯಿದ್ದು, ಅದರ ಸದ್ಭಳಕೆಯಾಗಬೇಕು. ಅರಣ್ಯನಾಶ, ಅತಿಯಾದ ಅಂತರ್ಜಲ ಬಳಕೆ, ಪರಿಸರ ಮಾಲಿನ್ಯ, ಅವೈಜ್ಞಾನಿಕ ನೀರಿನ ಬಳಕೆ, ಮಾನವನ ದುರಾಸೆಯಂತಹ ಮುಂತಾದ ಕಾರಣಗಳಿಂದ ಇದು ಬರಿದಾಗುತ್ತಿದ್ದು, ಇದು ಹೀಗಿಯೇ ಮುಂದುವರೆದರೆ ಕೆಲವು ವರ್ಷಗಳಲ್ಲಿ ನೀರಿಗಾಗಿ ಮೂರನೇ ವಿಶ್ವಯುದ್ಧ ಜರುಗಿದರೆ ಆಶ್ವರ್ಯಪಡಬೇಕಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಜಲಾಶಯದ ದಡವನ್ನು ಸ್ವಚ್ಚಗೊಳಿಸಲಾಯಿತು. ನೀರಿನಲ್ಲಿ ಕಸ-ಕಡ್ಡಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಹಾಕದಂತೆ ಭಕ್ತಾದಿಗಳಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಸಚಿನ್ ಬಿರಾದಾರ, ನಾಗೇಶ ಬಿರಾದಾರ, ಅಂಬಾರಾಯ, ಶಿವಪುತ್ರಪ್ಪ, ಶರಣಯ್ಯ, ನಾಗಯ್ಯ, ಸಿದ್ದಲಿಂಗಪ,್ಪ ವಿಜಯಲಕ್ಷ್ಮೀ, ಸಿದ್ದು ಸೇರಿದಂತೆ ಮತ್ತಿತರರಿದ್ದರು.