ಬೆಂಕಿ ಕಿಡಿಯಿಂದ ಹುಲ್ಲಿನ ಮೆದೆ ಸುಟ್ಟು ಭಸ್ಮ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.11: ವಿದ್ಯುತ್ ತಂತಿಗಳ ಪರಸ್ಪರ ಸಂಘರ್ಷದಿಂದ ಉಂಟಾದ ಬೆಂಕಿಯ ಕಿಡಿಯಿಂದ ತಂತಿಯ ಕೆಳಭಾಗದಲ್ಲಿದ್ದ ಭತ್ತದ ಹುಲ್ಲಿನ ಮೆದೆ ಸಂಪೂರ್ಣ ಸುಟ್ಟುಹೋಗಿ ರೈತರಿಗೆ ಲಕ್ಷಾಂತರ ರೂ ನಷ್ಠ ಸಂಭವಿಸಿದ ಘಟನೆ ತಾಲೂಕಿನ ಬೂಕನಕೆರೆ ಗ್ರಾಮದ ಬಳಿ ಘಟಿಸಿದೆ.
ಬೂಕನಕೆರೆ ಗ್ರಾಮದ ಭಾಗ್ಯ ಕೋಂ ರಾಮೇಗೌಡ ಎನ್ನುವವರು ಬೂಕನಕೆರೆ ಬಳಿಯ ಬಿ.ಬಾಚಹಳ್ಳಿ ಗ್ರಾಮದ ಎಲ್ಲೆಗೆ ಸೇರಿದ ಸರ್ವೆ ನಂ 144 ರ ಜಮೀನಿನಲ್ಲಿ ಭತ್ತ ಬೆಳೆದು ಭತ್ತದ ಹುಲ್ಲನ್ನು ತಮ್ಮ ಜಮೀನಿನ ಬಳಿಯೇ ಮೆದೆ ಹಾಕಿದ್ದರು. ಮೆದೆ ಹಾಕಿದ್ದ ಹುಲ್ಲಿನ ಮೇಲ್ಬಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ.
ಹಾದು ಹೋಗಿರುವ ವಿದ್ಯುತ್ ತಂತಿಗಳು ಗಾಳಿಯ ರಭಸಕ್ಕೆ ಪರಸ್ಪರ ಸಂಘರ್ಷಿಸಿ ಬೆಂಕಿಯ ಕಿಡಿ ಉಂಟಾಗಿದೆ. ವಿದ್ಯುತ್ ತಂತಿಯ ಬೆಂಕಿಯ ಕಿಡಿ ಒಣ ಹುಲ್ಲಿನ ಮೆದೆಯ ಮೇಲೆ ಬಿದ್ದು ಹುಲ್ಲಿನ ಮೆದೆ ಸಂಪೂರ್ಣ ಸುಟ್ಟು ಹೋಗಿದೆ. ತಾಲೂಕಿನಲ್ಲಿ ತೀವ್ರ ಬರಗಾಲದ ಚಾಯೆಯಿದ್ದು ದನಕರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಬೂಕನಕೆರೆಯ ರೈತ ಮಹಿಳೆ ಭಾಗ್ಯಮ್ಮ ತಮ್ಮ 3.5 ಎಕರೆ ಜಮೀನಿನಲ್ಲಿ ಬೆಳೆದು ಮೆದೆ ಹಾಕಿದ್ದ ಭತ್ತದ ಹುಲ್ಲು ಭಸ್ಮವಾಗಿದ್ದು ಲಕ್ಷಾಂತರ ರೂ ನಷ್ಠ ಅನುಭವಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ಪಡೆ ಬೆಂಕಿ ನಂದಿಸಲು ದಾವಿಸಿದರೂ ಅಗ್ನಿ ಶಾಮಕ ಪಡೆ ಆಗಮಿಸುವಷ್ಟರಲ್ಲಿಯೇ ಹುಲ್ಲಿನ ಮೆದೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ರೈತ ಮಹಿಳೆ ಭಾಗ್ಯಮ್ಮ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡ ಬೂಕನಕೆರೆ ನಾಗರಾಜು ತಾಲೂಕು ಆಡಳಿತ ಮತ್ತು ಸೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.