ಮತ್ತೆ ಮೋದಿ ಸರ್ಕಾರಕ್ಕಾಗಿ ರಾಜ್ಯದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಓಬಿಸಿ ಸಾಮಾಜಿಕ ಮತ್ತು ಯುವ ಸಮ್ಮೇಳನಗಳು
ಕಲಬುರಗಿ: ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಬಿಜೆಪಿ ಪಕ್ಷದ ರಾಷ್ಟ್ರೀಯ ಆದೇಶದ ಮೇರೆಗೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಓಬಿಸಿ ಅಧ್ಯಕ್ಷ ರಘು ಕೌಟಿಲ್ಯ ಅವರ ಸೂಚನೆಯಂತೆ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪಕ್ಕೆ ಪೂರಕವಾಗಿ ಪ್ರತಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಯುವ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಚಾಲಕ ಅವ್ವಣ್ಣ ಮ್ಯಾಕೇರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರವಾರು ಕನಿಷ್ಠ ಮೂರ್ನಾಲ್ಕು ಸಾಮಾಜಿಕ ಸಮ್ಮೇಳನ, ಲೋಕಸಭೆಯ ಕ್ಷೇತ್ರವಾರು ಕನಿಷ್ಠ 20 ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಹಿಂದುಳಿದ ವರ್ಗಗಳಲ್ಲಿನ ಮುಖಂಡರು, ಜನಪ್ರತಿನಿಧಿಗಳು, ಬುದ್ದಿಜೀವಿಗಳು, ಮಾಜಿ ಸೈನಿಕರು, ಫಲಾನುಭವಿಗಳು, ಮಹಿಳೆಯರು ಸೇರಿದಂತೆ ಸಮಾಜದ ಮೇಲೆ ಪ್ರಭಾವ ಬೀರುವಂತಹ ವ್ಯಕ್ತಿಗಳನ್ನು ಸಾಮಾಜಿಕ ಸಮ್ಮೇಳನದ ಮುಖಾಂತರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗಗಳಿಗೆ ಜಾರಿಗೆ ತಂದಿರುವ ಯೋಜನೆಗಳಾದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ, ಪಿಎಂ ವಿಶ್ವಕರ್ಮ ಯೋಜನೆಗಳ ಅಡಿಯಲ್ಲಿ 13000 ಕೋಟಿ ರೂ.ಗಳ ಬಿಡುಗಡೆ, ಪಿಎಂ ಸ್ವನಿಧಿ ಯೋಜನೆ, ಮತ್ತೈ ಸಂಪಾದ ಯೋಜನೆ ಅಡಿಯಲ್ಲಿ 20 ಸಾವಿರದ 50 ಕೋಟಿ, ಕೆನೆಪದರು 6 ಲಕ್ಷದಿಂದ 8 ಲಕ್ಷದವರೆಗೆ ಹೆಚ್ಚಳ, ಕೇಂದ್ರ ಸಂಪುಟದಲ್ಲಿ 17 ಜನ ಹಿಂದುಳಿದ ವರ್ಗಗಳಿಗೆ ಸಚಿವ ಸ್ಥಾನ ಮುಂತಾದ ಹಲವಾರು ಯೋಜನೆಗಳನ್ನು ದೇಶದ ಸುರಕ್ಷತೆ, ಜನಕಲ್ಯಾಣ ಮತ್ತು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅದ್ಭುತವಾದ ಸಾಧನೆ ಮಾಡುವ ಮುಖಾಂತರ ಜಗತ್ತಿನಲ್ಲಿ ಶಕ್ತಿಶಾಲಿ ರಾಷ್ಟ್ರವನ್ನಾಗಿಸುವ ವಿಷಯಗಳನ್ನು ಸಮ್ಮೇಳನದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಅವರು ವಿವರಿಸಿದರು.
18 ವರ್ಷ ತುಂಬಿರುವ ಓಬಿಸಿ ಯುವಕ, ಯುವತಿಯರಿಗೆ ಗುರುತಿಸಿ ಅವರಿಗೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಂಬಿಬಿಎಸ್, ಎಂಡಿ ಪೋಸ್ಟ್‍ಗಳಲ್ಲಿ ಶೇಕಡಾ 27ರಷ್ಟು ಮೀಸಲಾತಿ, ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 37000ರೂ.ಗಳ ವಿದ್ಯಾರ್ಥಿ ವೇತನ ಮುಂತಾದ ಯೋಜನೆಗಳ ಕುರಿತು ಯುವ ಸಮ್ಮೇಳನದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕನಿಷ್ಠ 800ರಿಂದ 1000 ಸಮ್ಮೇಳನಗಳನ್ನು ಪೂರೈಸಿ ಆ ಚಿತ್ರಗಳನ್ನು ಸರಳ ಆಪ್‍ನಲ್ಲಿ ಸಲ್ಲಿಸಲಾಗುತ್ತದೆ. ಸಮ್ಮೇಳನಗಳನ್ನು ಯಶಸ್ವಿಗೊಳಿಸಲು ಪ್ರತಿ ರಾಜ್ಯದಲ್ಲಿ ಸಂಚಾಲಕ, ಸಹ ಸಂಚಾಲಕರನ್ನು ಒಳಗೊಂಡ ಐವರ ತಂಡವನ್ನು ರಚಿಸಿ ಮಾರ್ಚ್ 12ರೊಳಗೆ ಕೈಗೊಂಡು ಪ್ರಧಾನಿ ಮೋದಿ ಸರ್ಕಾರವನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಮ್ಮೆನೂರ್, ನಗರ ಜಿಲ್ಲಾಧ್ಯಕ್ಷ ಅರವಿಂದ್ ಪೊದ್ದಾರ್, ಜಿಲ್ಲಾ ಸಂಚಾಲಕ ಬಿ.ಜೆ. ಬನ್ನಪ್ಪ, ಸಹ ಸಂಚಾಲಕ ಬಸವರಾಜ್ ಮದ್ದರಕಿ, ಪ್ರಧಾನ ಕಾರ್ಯದರ್ಶಿ ಶಿವಶರಣ್ ಕುಂಬಾರ್, ಪ್ರಮೋದ್ ಧುಮಾಳೆ, ನಾಗಪ್ಪ ರೋಣ್ ಮುಂತಾದವರು ಉಪಸ್ಥಿತರಿದ್ದರು.