ಮಾಜಿ ಶಾಸಕ ವಾಸು ಪಂಚಭೂತಗಳಲ್ಲಿ ಲೀನ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.11:- ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಶನಿವಾರ ಮುಂಜಾನೆ ಅಸುನೀಗಿದ್ದ ಮಾಜಿ ಶಾಸಕ ವಾಸು ಅವರ ಅಂತ್ಯಸಂಸ್ಕಾರ ಭಾನುವಾರ ಸಂಜೆ ವೇಳೆ ನೆರವೇರಿತು.
ವಾಸು ಮಾಲೀಕತ್ವದ, ಮೈಸೂರು- ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಒಕ್ಕಲಿಗ ಜನಾಂಗದ ಸಂಪ್ರದಾಯದಂತೆ ವಾಸು ಅವರ ಹಿರಿಯ ಮಗ ಕವೀಶ್ ಗೌಡ, ಚಿತೆಗೆ ಅಗ್ನಿಸ್ಪರ್ಶ ಮಾಡಿ ಅಂತಿಮ ವಿಧಿವಿಧಾನ ನೆರವೇರಿಸಿದರು.
ಈ ವೇಳೆ ವಾಸು ಅವರ ಮತ್ತಿಬ್ಬರು ಮಕ್ಕಳಾದ ಅವೀಶ್ ಗೌಡ, ರಿತೇಶ್ ಗೌಡ, ಸೊಸೆಯಂದಿರು, ಕುಟುಂಬಸ್ಥರು ಪೂಜಾ ಕಾರ್ಯ ನಡೆಸಿದರು.
ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು, ಆಪ್ತವಲಯದ ಸ್ನೇಹಿತರು ಉಪಸ್ಥಿತರಿದ್ದರು.
ವಾಸು ಅವರ ಪತ್ನಿ ಲಲಿತಾ ವಿ.ಗೌಡ ಅವರನ್ನು ಚಿತೆಗೇರಿಸಿದ ಜಾಗದ ಪಕ್ಕದಲ್ಲಿಯೇ ವಾಸು ಅವರನ್ನು ಚಿತೆಗೇರಿಸಲಾಯಿತು. ಅವರ ಪಾರ್ಥೀವ ಶರೀರವನ್ನು ಮೈಸೂರಿನ ಜಯಲಕ್ಷಿಪುರಂ ಬಡಾವಣೆಯ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.
ಧ್ವಜ ನಮನ: ಮಾಜಿ ಶಾಸಕ ವಾಸು ಅವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಂತರಾಗಿದ್ದರು. ಹೀಗಾಗಿಯೇ ಈ ಬಾರಿ ವಿಧಾನ ಸಭಾ ಚುನಾವಣೆಯ ಟಿಕೆಟ್ ಕೈ ತಪ್ಪಿದರೂ ಕಾಂಗ್ರೆಸ್ ಬಿಡಲಿಲ್ಲ. 2008ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದ ವಾಸು ಅವರು ಚಾಮರಾಜ ಕ್ಷೇತ್ರ ಸೇರಿದಂತೆ ಜಿಲ್ಲೆಗೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ನೆರವೇರಿಸಿದ್ದರು.
ಇದನ್ನು ಮನಗಂಡ ಜಿಲ್ಲಾ ಹಾಗೂ ನಗರ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಇಂದಿರಾ ಕಾಂಗ್ರೆಸ್ ಭವನದ ಆವರಣದಲ್ಲಿ ವಾಸು ಅವರ ಪಾರ್ಥಿವ ಶರೀರಕ್ಕೆ ಧ್ವಜ ಗೌರವ ಸಲ್ಲಿಸಲಾಯಿತು. ಮಧ್ಯಾಹ್ನದ ವೇಳೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಪಾರ್ಥಿವ ಶರೀರಕ್ಕೆ ಕಾಂಗ್ರೆಸ್‍ನ ಕಾರ್ಯಕರ್ತರು, ಜನಪ್ರತಿನಿಧಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ನಮನ ಸಲ್ಲಿಸಿದರು. ಮಾಜಿ ಶಾಸಕರೂ ಆದ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ಡಾ.ಪುಷ್ಪ ಅಮರನಾಥ್, ಡೈರಿ ವೆಂಕಟೇಶ್ ಮುಂತಾದವರು ಹಾಜರಿದ್ದರು.