ಜನಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆಗಳಲ್ಲೀಗ ಅಕ್ರಮದ ವಾಸನೆ: ಆಡಳಿತಾಧಿಕಾರಿಗಳನ್ನು ಓಲೈಸಿದರೆ ಅಕ್ರಮ ಕೆಲಸ ಸುಗಮ..?
ಸಂಜೆವಾಣಿ ವಾರ್ತೆ
ಹನೂರು ಮಾ 11 :- ಜನಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ನಡೆಸುವ ಅಧಿಕಾರಿಗಳ ಅಂದ ದರ್ಭಾರ್ ನಲ್ಲಿ ಬಹಳಷ್ಟು ಅಕ್ರಮಗಳು ನಡೆಯುತ್ತಿದ್ದರೂ ಆಡಳಿತಾಧಿಕಾರಿಗಳು ಮೌನವಾಗಿರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಚಾಮರಾಜನಗರ ಜಿಲ್ಲೆಯಲ್ಲಿನ ಜಿಲ್ಲಾ ಪಂಚಾಯ್ತಿ , ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ , ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಜನಪ್ರತಿನಿಧಿಗಳು ಇಲ್ಲದೇ ಇರುವುದೇ ಆಡಳಿತ ಸೂತ್ರ ಹಿಡಿದಿರುವ ಅಧಿಕಾರಿಗಳ ಧನದಾಹಿ ಚಿಂತನೆಗಳಿಂದ ಅಕ್ರಮ ಹೆಚ್ಚಾಗಿ ನಡೆಯುತ್ತಿದೆ ಎಂದು ಹೇಳಬಹುದಾಗಿದೆ.
ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಅಧ್ಯಕ್ಷರಿಲ್ಲದೆ ಅಲ್ಲಿನ ಆಯುಕ್ತರು ಕಛೇರಿಗೆ ಬರುವ ಬಡಾವಣೆಗಳ ಮಂಜೂರಾತಿಗೆ ಕಣ್ಮುಚ್ಚಿಕೊಂಡು ಸಹಿ ಹಾಕಿ ಆಡಳಿತಾಧಿಕಾರಿಗಳ ಅನುಮೋದನೆ ಮಾಡಿಸಿ ಕೊಡುವುದು ಇದೀಗ ಸುಲಭವಾಗಿದೆ. ಪಟ್ಟಣ ಪ್ರದೇಶದಲ್ಲಿ ಇರುವ ಬಹುತೇಕ ಬಡಾವಣೆಗಳಲ್ಲಿ ನೀಲಿ ನಕ್ಷೆಯಂತೆ ನಿರ್ದಿಷ್ಟ ಉಧ್ಯಾನವನ, ಹಾಗೂ ಸಾರ್ವಜನಿಕ ಬಳಕೆಗೆ ಸ್ಥಳ ಮೀಸಲಿಡಬೇಕು, ಅದನ್ನು ಯಾವುದೇ ಇಲ್ಲದ ಬಡಾವಣೆಗಳಿಗೆ ಅನುಮೋದನೆ ನೀಡುತ್ತಿರುವುದು ಕುರುಡು ಕಾಂಚಾಣ ಕುಣಿಯುತ್ತಿರುವುದಕ್ಕೆ ಸ್ಪಷ್ಟ ನಿದರ್ಶವಾಗಿದೆ.
ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಡಾವಣೆಗಳಲ್ಲಿ ನಿವೇಶನ ಖರೀಧಿ ಮಾಡುವವರಿಗೆ ಉಪ ನೊಂದಣಿ ಅಧಿಕಾರಿಗಳ ಕಛೇರಿಯಲ್ಲಿ ನೊಂದಣಿಯಾದ ಬಳಿಕ ನಗರಸಭೆಯಲ್ಲಿ ಖಾತೆ ಬದಲಾವಣೆ ಮತ್ತು ಇ-ಸ್ವತ್ತು ಮಾಡಿಸಬೇಕೆಂದರೆ ಖರೀದಿದಾರರು ಹರಸಾಹಸ ಪಡಲೇಬೇಕು. ನೇರವಾಗಿ ಖಾತೆ ಮತ್ತು ಇ-ಸ್ವತ್ತು ಮಾಡಿಸಲು ಅಷ್ಟು ಕಷ್ಟವಾಗಿದೆ. ಸುಲಭದ ಮಾರ್ಗ ಎಂದರೆ ಖಾತೆ ಮತ್ತು ಈಸ್ವತ್ತು ಮಾಡಿಸಲು ನಗರಸಭೆಯಲ್ಲಿ ಅಧಿಕಾರಿಗಳೇ ಅನಾಮಧೇಯವಾಗಿ ನೇಮಕಮಾಡಿಕೊಂಡಿರುವ ಮಧ್ಯವರ್ತಿಗಳೇ ಬೇಕು, ಮಧ್ಯವರ್ತಿಗಳು ಕೇಳಿದಷ್ಟು ಹಣ ನೀಡಿದರೆ ವಾರದೊಳಗೆ ಇ-ಸ್ವತ್ತು ಖರೀದಿದಾರರ ಕೈ ಸೇರಲಿದೆ.
ಒಂದು ಮೂಲಗಳ ಪ್ರಕಾರ ನಗರಸಭೆಯಲ್ಲಿ 30ಘಿ40 ಅಳತೆಯ ನಿವೇಶನದ ಇ-ಸ್ವತ್ತು ಮಾಡಿಬೇಕೆಂದರೆ ಕನಿಷ್ಟ 25 ಸಾವಿರ ರೂನಿಂದ 30 ಸಾವಿರ ತನಕ ರೇಟ್ ಫಿಕ್ಸ್ ಆಗಿದೆ. ಇದು ತಳ ಹಂತದ ನೌಕರರಿಂದ ಹಿಡಿದು ಪೌರಾಯುಕ್ತರ ತನಕ ಟೇಬಲ್ ಗೆ ಇಂತಿಷ್ಟು ಅಂತ ಕೊಡಲೇ ಬೇಕು, ಇನ್ನು ಇ-ಸ್ವತ್ತು ಮಾಡಿಸುವ ಮಧ್ಯವರ್ತಿಗೆ ಕೆಲಸ ಆದ ಮೇಲೆ 5 ಸಾವಿರ ಎಕ್ಸ್ ಟ್ರ ಕೊಡಬೇಕು. ಈ ಪರಿಸ್ಥಿತಿಯಲ್ಲಿದೆ ಜಿಲ್ಲೆಯಲ್ಲಿನ ಪುರಸಭೆ, ಪಟ್ಟಣ ಪಂಚಾಯ್ತಿ, ಹಾಗೂ ನಗರಸಭೆಯ ಆಡಳಿತ ಕಾರ್ಯವೈಖರಿ.
ಸರ್ಕಾರವೇನೋ ಇನ್ನೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸದೇ ಚುನಾವಣೆ ನಡೆಸದೇ ಇರೋದೇ ಆಡಳಿತ ನಡೆಸುವ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳಿಗೆ ಹಬ್ಬವೋ ಹಬ್ಬ ಎಂಬಂತಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿರುವವರು ಕೇಳಿದರೆ ಎಲ್ಲಾ ಆಡಳಿತಾಧಿಕಾರಿಗಳೇ ನಿರ್ಧಾರ ಕೈಗೊಳ್ಳುವರು ಅಂತ ಪೌರಾಯುಕ್ತರು ಹೇಳುವ ಮೂಲಕ ಸದಸ್ಯರ ಬಾಯಿ ಮುಚ್ಚಿಸುವರು.
ಇನ್ನು ಪ್ರಚಂಡ ಸದಸ್ಯರಿಗೆ ಪೌರಾಯುಕ್ತರು ತಿಂಗಳಿಗೆ ಕಾಸಿಲ್ಲದೇ ಮೂರ್ನಾಲ್ಕು ಇ-ಸ್ವತ್ತನ್ನು ಮಾಡಿಕೊಟ್ಟು ಬುಟ್ಟಿಗೆ ಹಾಕಿಕೊಳ್ಳುವರು. ಇದರಿಂದಾಗಿ ಸದಸ್ಯರುಗಳು ತುಟಿ ಪಿಟಕ್ಕೆನ್ನದೆ ತಾನು ಕಳ್ಳ ಪರರ ನಂಬ ಎನ್ನುವ ಗಾಧೆ ಮಾತಿನಂತೆ ಮಗುಮ್ಮಾಗಿದ್ದಾರೆ.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಕೆಲವು ಬಡಾವಣೆಗಳಲ್ಲಿ ನಿವೇಶನ ಖರೀದಿ ಮಾಡಿರುವ 160 ಮಂದಿಗೆ ಇ-ಸ್ವತ್ತು ಮಾಡಿಕೊಡಲು ನಗರಸಭೆಯಲ್ಲಿ ಫಿಕ್ಸ್ ಮಾಡಿರುವ ರೊಕ್ಕ ಪ್ರತಿ ನಿವೇಶನಕ್ಕೆ 30 ಸಾವಿರ ರೂ ನಂತೆ ಇದಕ್ಕೆ ಕೆಲವು ನಗರಸಭೆಯಲ್ಲಿನ ಅಧಿಕಾರಿಗಳೇ ಡೀಲ್ ಕುದುರಿಸುವ ಮಧ್ಯವರ್ತಿಗಳಾಗಿ ಬಿಟ್ಟಿದ್ದಾರೆ. ಸೇವಾ ಭಾರತಿ ಶಾಲೆಯ ಬಳಿ ಇರುವ ಬಡಾವಣೆ ಹಾಗೂ ಸುಜಾತ ಸಾ ಮೀಲ್ ಬಳಿ ನಗರಾಭಿವೃದ್ದಿ ಪ್ರಾಧಿಕಾರದ ಕಛೇರಿಯ ಮುಂಭಾಗ ಇರುವ ಬಡಾವಣೆ, ನಂಜನಗೂಡು ರಸ್ತೆಯಲ್ಲಿರು ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರದ ಎಡ ಭಾಗದಲ್ಲಿ ನೂತನವಾಗಿ ತಲೆ ಎತ್ತುತ್ತಿರುವ ಬಡಾವಣೆಯ ಮಾಲೀಕರಿಂದ ಡೀಲ್ ಕುದುರಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಡೀಲ್ ನಲ್ಲಿ ಬರುವ ಅಕ್ರಮ ಸಂಪಾದನೆಯಲ್ಲಿ ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳಿಗೆ ಶೇ 40% ರಷ್ಟು ಪಾಲು ನೀಡಬೇಕಂತೆ ಇಲ್ಲದಿದ್ದರೆ ಯಾವುದಕ್ಕೂ ಅನುಮೋದನೆ ಕೊಡಲ್ಲ ಎನ್ನುವ ಸತ್ಯ ಸಂಗತಿ ಇದೀಗ ಅಧಿಕಾರಿಗಳೊಬ್ಬರು ಹೇಳಿಕೊಂಡು ತಿರುಗಾಡುತ್ತಿರುವುದು ಸಾರ್ವಜನಿಕವಾಗಿ ಬಹಿರಂಗಗೊಂಡಿದೆ. ಇದಕ್ಕಾಗಿಯೇ ಜಿಲ್ಲಾಧಿಕಾರಿಗಳು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪೌರಾಯುಕ್ತರ ಸಭೆ ನಡೆಸಿದ್ದಾರೆ.
ನಗರಾಭಿವೃದ್ದಿ ಪ್ರಾಧಿಕಾರದ ಕಛೇರಿಯ ಮುಂಭಾಗದಲ್ಲಿರುವ ದೊಡ್ಡ ಮಟ್ಟದ ಬಡಾವಣೆಯಲ್ಲಿನ ನಿವೇಶನಗಳು ಮಾರಾಟಕ್ಕೆ ಇದೆ ಆದರೆ ಇಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ನಗರಾಭಿವೃದ್ದಿ ಪ್ರಾಧಿಕಾರದ ಕಛೇರಿಯ ಮುಂದೇನೆ ನಿವೇಶನ ಇದೆಯಲ್ಲಾ ಇನ್ನೇನು ಭಯ ಎಂದು ಹೇಳಿಕೊಳ್ಳುತ್ತಿರುವ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಖಾತೆ, ಇ-ಸ್ವತ್ತು ನೀಡಲು ಮುಂದಾಗುತ್ತಿದ್ದಾರೆ.
ಅದೇನೆ ಇರಲಿ ಜನಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿ ಆಡಳಿತಾಧಿಕಾರಿಗಳ ದರ್ಬಾರ್ ನಲ್ಲಿ ಜನತೆ ನಲುಕಿ ಹೋಗಿರುವುದು ಕಟು ಸತ್ಯವಾಗಿದೆ. ಮುಖ್ಯಾಧಿಕಾರಿಗಳು ಮತ್ತು ಪೌರಾಯುಕ್ತರು ಆಡಳಿತಾಧಿಕಾರಿಗಳನ್ನು ಸರಿಯಾಗಿ ಲೆಕ್ಕಕ್ಕೆ ತಕ್ಕಂತೆ ಸರಿದೂಗಿಸಿ ತಮ್ಮ ಅಕ್ರಮ ಕೆಲಸಗಳನ್ನು ಸಕ್ರಮ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.