ಪ್ರತಿಯೊಬ್ಬರಿಗೂ ಸಂವಿಧಾನದಿಂದ ಧಾರ್ಮಿಕ ಹಕ್ಕು
ಬಂಗಾರಪೇಟೆ.ಮಾ೧೧:ಭಾರತ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕನ್ನು ನೀಡಲಾಗಿದೆ, ಪ್ರತಿಯೊಂದು ಧರ್ಮದವರು ತಮ್ಮದೇ ಆದ ಆಚಾರ ವಿಚಾರ ಒಳಗೊಂಡಿರುತ್ತಾರೆ. ಇದರೊಟ್ಟಿಗೆ ತಮ್ಮ ಧರ್ಮವನ್ನು ಆರಾಧಿಸುವುದರ ಜೊತೆಯಲ್ಲಿ ಇತರ ಧರ್ಮವನ್ನು ಗೌರವಿಸಬೇಕು. ಮತ್ತು ಜನ್ಮನೀಡಿದ ತಾಯಿ ಹಾಗೂ ನಾವು ಮೆಟ್ಟಿದ ನೆಲವನ್ನು ಪೂಜಿಸುವಂತಾಗಬೇಕೆಂದು ಕಾಮಸಮುದ್ರ ಪೊಲೀಸ್ ನಿರೀಕ್ಷಕ ಕೃಷ್ಣಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೂದಿಕೋಟೆ ಹೋಬಳಿ ವ್ಯಾಪ್ತಿಯ ಬಲಮಂದೆ ಗ್ರಾಮದಲ್ಲಿ ಅಸ್ತಾನ್-ಇ-ಗೌಸ್ ಪಾಕ್ ಖಾಜಾ ಗರೀಬ್ ನವಾಜ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಉರುಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ವೈವಿಧ್ಯಮಯ ರಾಷ್ಟ್ರ. ಇಂದು ಮುಸ್ಲಿಂ ಸಮುದಾಯದವರು ಉರುಸ್‌ನ್ನು ಆಚರಿಸುತ್ತಿದ್ದರೆ, ಮತ್ತೊಂದೆಡೆ ಹಿಂದು ಧರ್ಮದವರು ಶಿವರಾತ್ರಿಯನ್ನು ಆಚರಿಸುತ್ತಿದೆ. ಈ ರೀತಿ ಏಕಕಾಲದಲ್ಲಿ ಎರಡು ಧರ್ಮಿಯರು ಆಚರಿಸುವುದು ಭಾರತದಲ್ಲಿ ಮಾತ್ರ. ಇದರೊಟ್ಟಿಗೆ ಬಲಮಂದೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಿಗೆ ಸೇರಿ ಉರುಸ್ ಆಚರಣೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ವಿಎಸ್‌ಎಸ್‌ಎನ್ ಸದಸ್ಯ ಪೆದ್ದನ್ನ ಮಾತನಾಡಿ, ದಿವಂಗತ ಅಮ್ಜದ್ ರವರು ೨೭ವರ್ಷಗಳ ಹಿಂದೆ ಭೀಮಗಾನಹಳ್ಳಿ, ಬಲಮಂದೆ ಹಾಗೂ ಸುತ್ತಮುತ್ತಲಿನ ಹಿಂದು ಮತ್ತು ಮುಸ್ಮಮಾನರ ಸಹಯೋಗದಲ್ಲಿ ಉರುಸ್ ಕಾರ್ಯಕ್ರಮವನ್ನು ಆಚರಿಸಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇದು ನಮ್ಮ ಹೆಮ್ಮೆಯಾಗಿದೆ. ಅದೇ ಹಾದಿಯಲ್ಲಿ ಅಮ್ಜದ್ ರವರ ಮಕ್ಕಳಾದ ಸಯ್ಯದ್‌ನವಾಜ್, ಸಯ್ಯದ್ ನಯಾಜ್ ಅವರು ಮುಂದುವರೆಸುತ್ತಿರುವುದು ಇಡೀ ತಾಲ್ಲೂಕಿಗೆ ಮಾದರಿಯಾಗಿದ್ದಾರೆ ಎಂದರು.
ಟ್ರಸ್ಟ್ನ ಅಧ್ಯಕ್ಷ ಸಯ್ಯದ್ ನವಾಜ್, ಕಾರ್ಯದರ್ಶಿ ಸಯ್ಯದ್ ನಯಾಜ್, ಗ್ರಾ.ಪಂ ಅಧ್ಯಕ್ಷ ರಾಮಶೆಟ್ಟಿ, ಡಿ.ಪಿ.ಹಳ್ಳಿ ಗ್ರಾ.ಪಂ ಸದಸ್ಯ ಮಂಜು, ನಾರಾಯಣಪ್ಪ, ಕರಿಂಸಾಬ್, ಸಯ್ಯದ್ ಮುಭಾರಕ್, ಸಯ್ಯದ್ ನಿಸಾರ್ ಹಾಗೂ ಇನ್ನಿತರರು ಇದ್ದರು.