ಇಷ್ಟಲಿಂಗ ಪೂಜೆಯ ಮೂಲಕ ಶಿವಯೋಗದ ಉತ್ತುಂಗದ ಶಿಖರ ಏರಿದ ಶಿವಯೋಗಿಗಳು
ಅಥಣಿ :ಮಾ.11: ಇಷ್ಠಲಿಂಗ ಪೂಜೆಯ ಮೂಲಕ ವಿಶ್ವಗುರು ಬಸವಣ್ಣನವರ ವಚನಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದು ಶಿವ ಯೋಗದ ಶಿಖರವನ್ನು ಏರಿದ ಮಹಾತ್ಮರೇ ಅಥಣಿಯ ಮುರುಗೇಂದ್ರ ಶಿವಯೋಗಿಗಳು. ಅವರ ಭಕ್ತರಾದ ನಾವೆಲ್ಲರೂ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಸಾಗಬೇಕು ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಗಚ್ಚಿನಮಠದಲ್ಲಿ ಶರಣ ಸಂಸ್ಕøತಿ ಉತ್ಸವದ ಚಿಂತನಾಗೋಷ್ಠಿಯಲ್ಲಿ ಶಿವಯೋಗಿಗಳ ನಿಜಾಚರಣೆ ಎಂಬ ವಿಷಯದ ಮಾತನಾಡಿದರು. ಇಷ್ಟಲಿಂಗ ಪೂಜೆ ಮತ್ತು ಶರಣರ ನೀಡಿದ ತತ್ವಗಳನ್ನು ಜೀವನದಲ್ಲಿ ಅಳವಡಿಕೊಂಡು ಸಾಗಿದ ಮನುಷ್ಯ ಮಹಾದೇವನಾಗಲೂ ಸಾಧ್ಯವಿದೆ.
ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು ಬಸವಣ್ಣವರ ವಚನಗಳು ಬಿಟ್ಟು ಬೇರೆ ಯಾವ ಸಾಹಿತ್ಯವನ್ನು ಓದಲಿಲ್ಲ. ಲಿಂಗ ಪೂಜೆ ಮೂಲಕ ಶಿವಯೋಗ ಸಾಧನೆ ಮಾಡಿದ್ದಾರೆ.ಭಕ್ತರು ಶರಣ ತತ್ವಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಳಗಾವಿಯ ವಿಶ್ರಾಂತ ಪ್ರಾಧ್ಯಾಪಕಿ ಡಾ. ಗುರುದೇವಿ ಹುಲೆಪ್ನವರ ಮಠ ತಮ್ಮ ಚಿಂತನಪರ ಮಾತುಗಳಲ್ಲಿ
ಅಥಣಿ ಮುರುಗೇಂದ್ರ ಶಿವಯೋಗಿಗಳು ಶಿವಯೋಗಿಗಳು ಸಕಲ ಜೀವರಾಶಿಗಳಲ್ಲಿ ದಯೆ ತೋರುವವರಾಗಿದ್ದರು. ಇಷ್ಟಲಿಂಗ ಪೂಜೆಗೆ ಬೇಕಾಗುವ ಹೂವು ಮತ್ತು ಪತ್ರಿಗಳನ್ನು ಗಿಡಗಳಿಂದ ಕಿತ್ತುಕೊಳ್ಳದೆ, ಕೆಳಗೆ ಬಿದ್ದಿರುವ ಹೂವು ಮತ್ತು ಪತ್ರಿ ಎಲೆಗಳನ್ನ ಎತ್ತಿಕೊಳ್ಳುತ್ತಿದ್ದರು. ಸಕಲ ಜೀವರಾಶಿಗಳಲ್ಲಿ ದಯೆ ತೋರುವವರಾಗಿದ್ದರು. ಹಾವುಗಳನ್ನು ಶಿವನ ಆಭರಣ ಎಂದರು, ಮಾಂಸಹಾರಿ ಹುಲಿಗೆ ಉತ್ತತ್ತಿ ತಿನಿಸಿದ ಮಹಾತ್ಮರು. ಶ್ರೀ ಮಠಕ್ಕೆ ಬರುವ ಬಕುಳ ಪಕ್ಷಿಗಳ ರೂಪದಲ್ಲಿ ತಮ್ಮ ಗುರುಗಳನ್ನ ಕಾಣುತ್ತಿದ್ದರು. ಯಾವುದೇ ಅಂತಸ್ತು, ಅಧಿಕಾರಕ್ಕೆ ಆಸೆ ಪಡದೆ ಜನಕಲ್ಯಾಣಕ್ಕಾಗಿ ಆದರ್ಶ ಬದುಕು ನಡೆಸಿದವರು. ಸೂಕ್ಷ್ಮ ಸಂವೇದನೆ ಹೊಂದಿದ್ದ ಶಿವಯೋಗಿಗಳು ಲಿಂಗಾಯತ ಸಮಾಜದ ಉದ್ಧಾರಕ್ಕಾಗಿ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ತ್ರಿವಿಧ ದಾಸೋಹ ನೀಡಿದವರು.ಇಷ್ಟ ಲಿಂಗ ಪೂಜೆಯ ಮೂಲಕ ಉತ್ತುಂಗದ ಶಿಖರವನ್ನು ಏರಿದವರು. ಅಂತ ಮಹಾತ್ಮರ ಜೀವನ ಚರಿತ್ರೆಯನ್ನು ನಾವೆಲ್ಲರೂ ಅರಿತುಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು. ಮೂಡನಂಬಿಕೆ, ಕಂದಾಚಾರಗಳಿಗೆ ಭಕ್ತರು ಕಿವಿಗೊಡಬಾರದು ಎಂದರು.
ಶೇಗುಣಸಿಯ ಡಾ. ಮಹಾಂತ ಪ್ರಭು ಸ್ವಾಮೀಜಿ
ಶಿವಯೋಗವನ್ನು ಎಲ್ಲ ವರ್ಗದ ಎಲ್ಲ ಸಮುದಾಯದವರು ಮಾಡಬೇಕು. ಇಷ್ಟ ಲಿಂಗ ಪೂಜೆ, ಲಿಂಗಧಾರಣ ಜಾತಿಯ ಕರುಹು ಅಲ್ಲ. ಇಷ್ಟಲಿಂಗ ಪೂಜೆ ಇರುವವರಿಗೆ ಬಸವ, ಅವರ ಸಂದೇಶ ಉಳಿಯುತ್ತವೆ. ಸಂಸ್ಕಾರ, ಧರ್ಮ, ಸಂಸ್ಕೃತಿಯನ್ನು ಮಠಮಾನ್ಯಗಳು, ಮಠಾಧೀಶರು ಉಳಿಸಲು ಶ್ರಮಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಚ್ಚಿನ ಮಠದ ಪೀಠಾಧಿಪತಿ ಶಿವಬಸವ ಸ್ವಾಮೀಜಿ ಮಾತನಾಡಿ ಶಿವಯೋಗಿಗಳ ಬದುಕು ಅತ್ಯಂತ ಪವಿತ್ರವಾಗಿತ್ತು. ಅವರಿಗೆ ಅವರೇ ಸಾಟಿ. ಕಾವಿಕುಲಕ್ಕೆ ದೊಡ್ಡ ಆದರ್ಶ. ಅವರು ಅಧಿಕಾರ, ಅಂತಸ್ತು ಗಳಿಗೆ ಎಂದಿಗೂ ಅಸೆ ಪಟ್ಟವರಲ್ಲ, ಅವರ ಸಾತ್ವಿಕ ಬದುಕು ಎಲ್ಲರಿಗೂ ಆದರ್ಶವಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುವರ್ಣ ಸಾಧಕ ಪ್ರಶಸ್ತಿ ಪಡೆದ ಅಥಣಿ ನೀರಾವರಿ ಇಲಾಖೆಯ ಸಹಾಯಕ ಅಭಿಯಂತ ಪ್ರವೀಣ ಹುಣಸಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುರುಗ ಮಠದ ಮೋಕ್ಷ ಪತಿ ಸ್ವಾಮೀಜಿ, ತೇಲಸಂಗದ ವೀರೇಶ್ವರ ದೇವರು, ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಪ್ರವೀಣ ಹುಣಸಿಕಟ್ಟಿ, ಮುಂಬೈನ ಉದ್ಯಮಿ ಶಿವಲಿಂಗಪ್ಪಾ ಧವಳೇಶ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಮತ್ತು ಶ್ರೀಮುರಗೇಂದ್ರ ಶಿವಯೋಗಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯಗಳು ಜರುಗಿದವು. ಶಿವಾನಂದ ದಿವಾನಮಳ ಸ್ವಾಗತಿಸಿದರು. ಸಂಗಮೇಶ ಹಚ್ಚುವುದು ನಿರೂಪಿಸಿದರು. ಎ ಎಂ ಖೋಬ್ರಿ ವಂದಿಸಿದರು.