ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವ ಜಾಗತಿಕ ದಾಖಲೆಗೆ ಸೇರ್ಪಡೆ: ಸಚಿವ ಎಂ.ಬಿ. ಪಾಟೀಲ ವಿಶ್ವಾಸ
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. 11: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿದ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವ ನಾನಾ ಜಾಗತಿಕ ದಾಖಲೆಗಳಿಗೆ ಸೇರ್ಪಡೆಯಾಗಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಆವರಣದಲ್ಲಿ 1500 ವೈದ್ಯಕೀಯ ವಿದ್ಯಾರ್ಥಿಗಳು ಬಿಡಿಸಿರುವ ಎಲ್ಲ 250 ರಂಗೋಲಿ ಚಿತ್ರಗಳನ್ನು ವೀಕ್ಷಿ,ಸಿದ ಅವರು, ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನವಾಗಿದೆ. ಈ ಐತಿಹಾಸಿಕ ಘಟನೆಗೆ ನಾವzಲ್ಲರೂ ಕೂಡ ಸಾಕ್ಷಿಯಾಗುತ್ತಿದ್ದೇವೆ. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿಕೊಂಡು ಸ್ವಾಸ್ಥ್ಯ ರಂಗೋಲಿ ಮಹೋತ್ಸವ ಮಾಡಿದ್ದಾರೆ. ಮನುಷ್ಯರಲ್ಲಿ ಕಾಣಿಸಿಕೊಳ್ಳುವ ರೋಗಗಳು, ದೇಹದ ನಾನಾ ಭಾಗಗಳು, ಅವುಗಳ ಕಾರ್ಯ ನಿರ್ವಹಣೆ, ದುಷ್ಚಟಗಳು ಮತ್ತು ನಿರ್ಲಕ್ಷ್ಯದಿಂದ ಆರೋಗ್ಯದ ಮೇಲಾಗುವ ಪರಿಣಾಮ, ನಾವು ಅವುಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಂಗೋಲಿಯ ಚಿತ್ರಗಳ ಮೂಲಕ ಕೂಲಂಕಷವಾಗಿ ಅರ್ಥಪೂರ್ಣವಾಗಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಆರೋಗ್ಯದ ಜೊತೆಗೆ ರಾಷ್ಟ್ರೀಯತೆ, ನಾಡಿನ ಪುಣ್ಯಪುರುಷರ ಚಿತ್ರಗಳನ್ನೂ ಸಹ ಬಿಡಿಸಿದ ಮತ್ತು ಇದಕ್ಕೆ ಪೆÇ್ರೀತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶುಭ ಹಾರೈಸುತ್ತೇನೆ. ನಾನಾ ಜಾಗತಿಕ ದಾಖಲೆಗಳಲ್ಲಿ ಸೇರ್ಪಡೆಯಾಗುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಗಿನ್ನೇಸ್ ಬುಕ್ ಆಫ್ ರೆಕಾಡ್ರ್ಸ್, ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್, ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್, ಎಲೈಟ್ ವಲ್ರ್ಡ್ ರೆಕಾಡ್ರ್ಸ್, ಲಿಮ್ಕಾ ಬುಕ್ ಆಫ್ ರೆಕಾಡ್ಸ್ರ್ರ್ ಎಲ್ಲ ದಾಖಲೆಗಳಿಗೆ ಈ ಮಹೋತ್ಸವ ಸೇರುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಇದು ಇಡೀ ಪ್ರಪಂಚದಲ್ಲಿ ಪ್ರಪ್ರಥಮ ಪ್ರಯೋಗ ಇದಾಗಿದೆ. ಇದರ ಬಗ್ಗೆ ಸಾಕಷ್ಟು ಪ್ರಶಂಸೆಗಳು ಬರುತ್ತಿವೆ. ಕೇಂದ್ರ ಆರೋಗ್ಯ ಸಚಿವರಿಗೆ, ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸೇರಿದಂತೆ ನಾನಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ. ಇದು ಬಹುದೊಡ್ಡ ಪ್ರಯತ್ನವಾಗಿದ್ದು, ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೂ ಪ್ರೇರಣೆ ಸಿಗಲಿದೆ. ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕು ಎನ್ನುವ ಗುರಿ ತಲುಪಲು ಸಾಧ್ಯವಾಗುತ್ತದೆ. ಅಂತಿಮ ಫಲಿತಾಂಶ ಬಂದ ನಂತರ ಎಲ್ಲ ದಾಖಲೆಗಳಿಗೆ ಮಾನ್ಯತೆ ಸಿಗಲಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಐಟಿ ವಿಭಾಗದ ಮುಖ್ಯಸ್ಥ ಡಾ. ದೀಪಕ ಕುಮಾರ ಚವ್ಹಾಣ, ಕಾರ್ಯಕ್ರಮ ಸಂಯೋಜಕಿ ಡಾ. ನಂದಿನಿ ಮುಚ್ಚಂಡಿ, ಡಾ. ರವಿ ಬಿರಾದಾರ, ಡಾ. ಉದಯಕುಮಾರ ನುಚ್ಚಿ, ಡಾ. ದಯಾನಂದ ಮುಂದಾತವರು ಉಪಸ್ಥಿತರಿದ್ದರು.
ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವವನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದ್ದು, ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ವಿಜಯಪುರ ಜಿಲ್ಲೆಯ ಸಾರ್ವಜನಿಕರು ಮತ್ತು ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ, ಆರೋಗ್ಯ ಸಂಬಂಧಿತ ಮಾಹಿತಿಯನ್ನು ಪಡೆಯಬೇಕು ಎಂದು ಸಚಿವ ಎಂ. ಬಿ. ಪಾಟೀಲ ಮನವಿ ಮಾಡಿದ್ದಾರೆ.