ಬಳ್ಳಾರಿಯ ಸಂತ ಜೋಸೆಫರ ಬಾಲಕರ ಪ್ರೌಢ ಶಾಲೆಯಲ್ಲಿ “ಮಹಿಳಾ ದಿನೋತ್ಸವದ ಸಂಭ್ರಮಾಚರಣೆ ”
(ಸಂಜೆವಾಣಿ ಪ್ರತಿನಿಧಿಯಂದ)
ಬಳ್ಳಾರಿ, ಮಾ.10: ಕೌಲ್ ಬಜಾರಿನ ಸಂತ ಜೋಸೆಫರ ಬಾಲಕರ ಪ್ರೌಢ ಶಾಲೆಯಲ್ಲಿ ಅದ್ದೂರಿಯಾಗಿ ಮಹಿಳಾ ದಿನಾಚರಣೆಯ ಸಂಭ್ರಮವನ್ನು ವ್ಯವಸ್ಥಾಪಕರು, ಉಪ ವ್ಯವಸ್ಥಾಪಕರು, ಶಿಕ್ಷಕರು ತಾವೇ ವಾದ್ಯ ಮೇಳಗಳನ್ನು ನುಡಿಸುತ್ತಾ ಮಹಿಳಾ ಶಿಕ್ಷಕಿಯರನ್ನು, ಸಿಬ್ಬಂದಿವರ್ಗದವರನ್ನು  ಗೌರವಪೂರ್ವಕವಾಗಿ ವೇದಿಕೆಗೆ ಕರೆತಂದರು. ಪ್ರಾರ್ಥನಾ ನೃತ್ಯದೊಂದಿಗೆ ಮಕ್ಕಳು ಶಿಕ್ಷಕಿಯರನ್ನು ಸ್ವಾಗತಿಸಿದರು. ಶಿಕ್ಷಕಿಯರೆಲ್ಲರೂ ಗಂಧವನ್ನು ಲೇಪಿಸಿಕೊಂಡು ಮೇಣದ ಬತ್ತಿಯನ್ನು ಹಚ್ಚಿ ವೇದಿಕೆಯಲ್ಲಿ ಇಡಲಾದ ಕ್ಯಾನ್‍ವಾಸಿನ ಮೇಲೆ ಕುಂಚದಿಂದ ಬಣ್ಣ ಬಳಿದಾಗ ಅದರಲ್ಲಿ ಅಗೋಚರವಾಗಿದ್ದ ಜೀವನದ ಮಜಲುಗಳಾದ ಬಾಲ್ಯಾವಸ್ಥೆ, ಪ್ರೌಢಾವಸ್ಥೆ, ಯೌವನಾವಸ್ಥೆ, ಗೃಹಸ್ಥಾವಸ್ಥೆ, ವೃದ್ಧಾವಸ್ಥೆಯ ಚಿತ್ರಣವು ಅಚ್ಚರಿಯಾಗಿ ಗೋಚರವಾಯಿತು.
ಶಾಲಾ ವ್ಯವಸ್ಥಾಪಕರಾದ ಫಾದರ್. ದಾನಪ್ಪ ಎಮ್. ಅವರು ಮಾತನಾಡುತ್ತಾ ಪ್ರತಿಯೊಬ್ಬ ಪುರುಷನ ಗೆಲುವಿನ ಹಿಂದೆ ಒಬ್ಬ ಸ್ತ್ರೀ ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಶಿಕ್ಷಕಿಯಾಗಿ ಅವರ ಹಿಂದಿರುತ್ತಾರೆ. ಮಹಿಳೆಯರ ಪಾತ್ರ ಶ್ರೇಷ್ಠವಾದದ್ದೆಂದು ಶ್ಲಾಘಿಸಿದರು.
ಉಪ ವ್ಯವಸ್ಥಾಪಕರಾದ ಫಾದರ್. ರಾಯಪ್ಪ ಟಿ. ಅವರು ಮಾತನಾಡುತ್ತಾ ಮಹಿಳೆಯ ಘನತೆಯ ಬಗ್ಗೆ ಎಲ್ಲಾ ಧರ್ಮ ಗ್ರಂಥಗಳ ಉಲ್ಲೇಖಗಳೊಂದಿಗೆ ಸ್ತ್ರೀ ಸೃಷ್ಟಿಯ ಮೂಲ ಅವರನ್ನು ಗೌರವದಿಂದ ಕಾಣೋಣ ಎಂದು ಹೇಳಿದರು.
ಎಲ್ಲಾ ಮಹಿಳಾ ಶಿಕ್ಷಕಿಯರಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಿ ಸಿಹಿ ಹಂಚಲಾಯಿತು. ಶಾಲಾ ಪ್ರತಿಭಾಕಾರಂಜಿಯಲ್ಲಿ ವಿಜೇತ ತಂಡಗಳ ಉಸ್ತುವಾರಿ ಶಿಕ್ಷಕಿಯರನ್ನು ಬಹುಮಾನಗಳೊಂದಿಗೆ ಪುರಸ್ಕರಿಸಿದರು. ಶಿಕ್ಷಕಿಯರು  ಈ ಆಚರಣೆ ಅವಿಸ್ಮರಣೀಯವಾದದ್ದೆಂದು ಕೊಂಡಾಡಿದರು.
ಈ ಎಲ್ಲಾ ಕಾರ್ಯಕ್ರಮವನ್ನು ಪುರುಷ ಶಿಕ್ಷಕರಾದ  ರಾಧಕೃಷ್ಣ,  ಸೈಮನ್ , ಜೋಸೆಫ್, ವೆಂಕಟೇಶ್,  ಬಾಬು,  ಅಂತೋನಿ, . ಜಯರಾಜ್,  ಅನಂತರಾಜ್,  ಸುನೀಲ್,  ಪ್ರಸಾದ್, ರಾಮನಾಯ್ಕ, ಮೋತಿರಾಜ್ ರವರು ವ್ಯವಸ್ಥಾಪಕರ ಹಾಗೂ ಉಪ ವ್ಯವಸ್ಥಾಪಕರ ನೇತೃತ್ವದಲ್ಲಿ ಅದ್ದೂರಿಯಾಗಿ ಆಯೋಜಿಸಿ ಮಹಿಳೆಯರಿಗೆ ನುಡಿನಮನಗಳನ್ನು ಸಲ್ಲಿಸಿ ಪ್ರಶಂಸಿಸಿದರು.