ಮುಷ್ಟೂರು ಸರ್ಕಾರಿ ಪ್ರೌಢ ಶಾಲೆ: ಬೀಳ್ಕೊಡುಗೆ ಸಮಾರಂಭಆತ್ಮ ಸ್ಥೈರ್ಯದಿಂದ ಸಾಧನೆ ಸಾಧ್ಯ-ಶಿವರಾಜ ಪೂಜಾರಿ
ಅರಕೇರಾ.ಮಾ.೧೦- ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ, ವಿಶ್ಲೇಷಿಸುವ ಕೌಶಲ ಜತೆಗೆ ಆತ್ಮಸ್ಥೈರ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಹೇಳಿದರು.
ಅರಕೇರಾ ತಾಲೂಕಿನ ಮುಷ್ಟೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಶೈಕ್ಷಣಿಕ ಪ್ರಗತಿಗೆ ಫಲಿತಾಂಶ ಸಹಕಾರಿಯಾಗಲಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಪರೀಕ್ಷೆ ಎದುರಿಸಬೇಕು. ಪಾಲಕರ ಒತ್ತಡಕ್ಕೆ ಓದಬಾರದು. ವೈಯಕ್ತಿಕ ಶ್ರಮ, ಸಾಧಿಸುವ ಹಂಬಲದಿಂದ ಶಿಕ್ಷಣ ಪಡೆಯಬೇಕು ಎಂದರು.
ಬಿಆರ್‌ಪಿ ಶಿವಕುಮಾರ ನಾಡಗೌಡ ಮಾತನಾಡಿ, ಶಾಲೆಗಳು ಪ್ರತಿಯೊಬ್ಬರ ಜೀವನಕ್ಕೆ ಸ್ವಾಭಿಮಾನದ ಬದುಕು ಕಟ್ಟುವ ಕಲ್ಪ ವೃಕ್ಷಗಳಾಗಿವೆ. ಇಲ್ಲಿ ಆಟ, ಓಟ, ಪಾಠ ಎಲ್ಲವೂ ಸಿಗುತ್ತದೆ. ಸಮಯ ಪ್ರತಿಯೊಬ್ಬರ ಜೀವನಕ್ಕೆ ಪಾಠ ಕಲಿಸುತ್ತದೆ. ಆದ್ದರಿಂದ ಸಮಯವನ್ನು ವ್ಯರ್ಥ ಮಾಡದೇ, ಕಲಿಕೆಯತ್ತ ಗಮನಹರಿಸಬೇಕು ಎಂದರು.
ಗೆಜ್ಜೆಬಾವಿ ವಿದ್ಯಾರ್ಥಿನಿ ಸರಸ್ವತಿ ಚನ್ನಪ್ಪ ಶಾಲೆಗೆ ಒಂದು ದಿನವೂ ಗೈರಾಗದಿರುವುದರಿಂದ ನೆನಪಿನ ಕಾಣಿಕೆ ನೀಡಿ ಪ್ರಶಂಶಿಸಿದರು. ಮುಖ್ಯ ಶಿಕ್ಷಕ ಅಮೀತ್, ಶೃತಿ ಸಂಸ್ಕೃತಿ ಸಂಸ್ಥೆ ತಾಲೂಕು ಸಂಯೋಜಕ ರಾಮಣ್ಣ ಎನ್ ಗಣೇಕಲ್, ವಿಎಸ್‌ಎಸ್‌ಎನ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಂಗನಾಥ, ಶಿಕ್ಷಕರಾದ ಸಂಗಮೇಶ ಯಡ್ರಾಮಿ, ಆನಂದ ಇದ್ದರು.