ಆನೆಹೊಸೂರು ಗ್ರಾಪಂ, ಪಿಡಿಓ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು
(ಸಂಜೆವಾಣಿ ಪ್ರತಿನಿಧಿಯಿಂದ)
ಲಿಂಗಸುಗೂರು,ಮಾ.೧೦- ತಾಲ್ಲೂಕಿನ ಆನೆ ಹೊಸೂರು ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಿಗೆ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಫಾರಸ್ಸು ಮಾಡಿದ್ದಾರೆ.
ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಶಿಕಲಾ ಪಾಟೀಲ್ ಅವರು ೨೦೨೧-೨೨ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು,ವ್ಯವಸ್ಥಾಪಕರು ಹಾಗೂ ಲೆಕ್ಕಪರಿಶೋಧಕರು ಇವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ನಂತರ ಲೆಕ್ಕಪರಿಶೋಧಕರು ಗ್ರಾಮಪಂಚಾಯ್ತಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಸಲ್ಲಿಸಿದ ವರದಿಯಲ್ಲಿ ಪಿಡಿಒ ಶಶಿಕಲಾ ಅವರು ೧೫ನೇ ಹಣಕಾಸು ಯೋಜನೆಯ ಮಾರ್ಗಸೂಚಿ ಉಲ್ಲಂಘಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿರುವ ಹಿನ್ನೆಲೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ವರದಿಯನ್ವಯ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಚಾಯತ್‌ರಾಜ್ ಆಯುಕ್ತರಿಗೆ ಪತ್ರ ಬರೆದು ಪಿಡಿಓ ಶಶಿಕಲಾ ಪಾಟೀಲ್ ವಿರುದ್ಧ ವಿಚಾರಣೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.