ಮಹಿಳಾ ನಿಲಯದಿಂದ ಮಹಿಳೆ ನಾಪತ್ತೆ
ಕಲಬುರಗಿ,ಮಾ.10-ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದಿಂದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಮಾ.8 ರಂದು ಬೆಳಿಗ್ಗೆ ನಾಪತ್ತೆಯಾಗಿದ್ದಾರೆ.
ಮೂಲತ: ಮಹಾರಾಷ್ಟ್ರದ ಅಕ್ಲೂಸ ಗ್ರಾಮದವರಾದ ಮಮತಾ ಅಲಿಯಾಸ್ ಮಹಾದೇವಿ (32) ಎಂಬ ಮಹಿಳೆಯೇ ಮಹಿಳಾ ನಿಲಯದಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಮಹಿಳಾ ನಿಲಯದ ಅಧೀಕ್ಷಕಿ ಅನುರಾಧಾ ಎಸ್.ಪಾಟೀಲ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ಅಲೆದಾಡುತ್ತಿದ್ದ ಮಮತಾ ಅವರನ್ನು ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮತ್ತು ಸಿಬ್ಬಂದಿ ಸಾಂತ್ವನ ಕೇಂದ್ರದ ಮೂಲಕ ರಾಜ್ಯ ಮಹಿಳಾ ನಿಲಯಕ್ಕೆ ಕಳುಹಿಸಲಾಗಿತ್ತು. ಮಮತಾ ಅವರ ತಾಯಿ ಸೊಲ್ಲಾಪುರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಆಘಾತಗೊಂಡು ಇವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಮಹಿಳಾ ನಿಲಯದಿಂದ ಬಿಡುಗಡೆ ಮಾಡುವಂತೆ ಹಠ ಹಿಡಿದಿದ್ದರು. ಎರಡು ಬಾರಿ ಓಡಿ ಹೋಗಲು ಯತ್ನಿಸಿದ್ದರು. ಮಾ.8 ರಂದು ಬೆಳಿಗ್ಗೆ ಮಹಿಳಾ ನಿಲಯದಿಂದ ನಾಪತ್ತೆಯಾಗಿದ್ದಾರೆ. ಇದಕ್ಕೆ ನಿಲಯದ ಸಿಬ್ಬಂದಿ ಪದ್ಮಾ ಶಿವಶಂಕರ ಪೂಜಾರಿ ಅವರ ಬೇಜವಾಬ್ದಾರಿಯೇ ಕಾರಣ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.