ಖಾಸಗಿ ರಂಗದಲ್ಲಿರುವ ಅವಕಾಶ ಸದ್ಭಳಕೆ ಮಾಡಿಕೊಳ್ಳಿ
ಚಿಟಗುಪ್ಪ,ಮಾ.10-ನಮ್ಮ ಸಮಾಜದಲ್ಲಿ ಶಾಲೆ ಕಲೆತು ಪದವಿ ಗಳಿಸುವುದು ಕೇವಲ ಸರ್ಕಾರಿ ಕೆಲಸ ಮಾಡುವುದಕ್ಕಾಗಿ ಎಂಬ ಅಲಿಖಿತ ನಿಯಮ ಹಾಸುಹೊಕ್ಕಿದೆ, ಈ ವ್ಯಾಮೋಹ ಮೊದಲು ಬದಲಾವಣೆಯಾಗಬೇಕು, ಇವತ್ತು ಖಾಸಗಿ ರಂಗದಲ್ಲಿ ಸಾವಿರಾರು ಅವಕಾಶಗಳಿವೆ, ಇದನ್ನು ಸದ್ಭಳಕೆ ಮಾಡಿಕೊಳ್ಳುವ ಗುರಿ ವಿದ್ಯಾರ್ಥಿಗಳಲ್ಲಿರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನವೀನ್ ಗಂಜಿ ನುಡಿದರು.
ಪಟ್ಟಣದ ಜ್ಞಾನಗಂಗಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗೌರಿಬಾಯಿ ಅಗರವಾಲ್ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಕಾರ್ಯಕ್ರಮದ ಮತ್ತೊರ್ವ ಮುಖ್ಯ ಅತಿಥಿ ನೀಲಕಂಠ ಇಸ್ಲಾಂಪುರ್ ಮಾತನಾಡಿ, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಉಪಯುಕ್ತ ಸಲಹೆಗಳನ್ನು ನೀಡಿದರು. ಶಾಲೆಯ ಮುಖ್ಯಗುರು ಶ್ರೀನಿವಾಸ್ ಕುಲಕರ್ಣಿ ಮಾತನಾಡಿ, ಇಷ್ಟು ದಿನ ನಮ್ಮ ಶಾಲೆಯಲ್ಲಿದ್ದು ಈಗ ಮುಂದಿನ ಶಿಕ್ಷಣಕ್ಕಾಗಿ ಹೊರಜಗತ್ತಿಗೆ ಕಾಲಿಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.
ಶಿಕ್ಷಕರಾದ ಸಾವಿತ್ರಿ ತುಕಾರಾಂ, ಪುಷ್ಪಲತಾ, ವಿದ್ಯಾರ್ಥಿಗಳ ಕಲಿಕೆ, ಮುಂದೆ ಸಾಗಬೇಕಾದ ದಾರಿ, ಆಯ್ಕೆ ಗುರಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ಶಾಲೆಯ ಶಿಕ್ಷಕಿ ಸವಿತಾ ಪಾಟೀಲರಿಗೆ ಸಾವಿತ್ರಿಬಾಯಿ ಫುಲೆ ಶಿಕ್ಷಣ ಸಂಘದ ಜಿಲ್ಲಾಮಟ್ಟದ ಸೇವಾರತ್ನ ಪ್ರಶಸ್ತಿ ದೊರಕಿದ ಪ್ರಯುಕ್ತ ವಿಶೇಷವಾಗಿ ಸನ್ಮಾನಿಸಲಾಯಿತು.ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಪರಿಸರ ಹಾಗು ಶಿಕ್ಷಕರ ಕೊಡುಗೆ ಹಾಗು ಸಹಭಾಗಿತ್ವವನ್ನು ಸ್ಮರಿಸಿ ಭಾವುಕರಾದರು.ಪ್ರೌಢ ಶಾಲೆಯ ಮುಖ್ಯಗುರು ಶ್ರೀನಿವಾಸ್ ಕುಲಕರ್ಣಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಪುಷ್ಪಲತಾ ಸಿ ರಮುಂಡಿ, ಪತ್ರಕರ್ತ ಸೈಯದ್ ಮುಸ್ತಫಾ ಖಾದ್ರಿ,ಶಿಕ್ಷಕರಾದ ತುಕಾರಾಂ, ವಿಶ್ವನಾಥ್ ರೆಡ್ಡಿ, ಸಂತೋಷ, ವಿಮಲಾಬಾಯಿ, ಜ್ಯೋತಿ ವಾಲಿ, ಸಾವಿತ್ರಿ, ಮಲ್ಲಮ್ಮ, ಮಾಣಿಕ, ನಾಗೇಶ್, ಶಶಿಕಲಾ, ಭಾಗ್ಯಶ್ರೀ, ನಿಶ್ಚಿತಾ, ನಿಶಾ ಸೇರಿದಂತೆ ಶಾಲಾ ಮಕ್ಕಳಿದ್ದರು.