11 ರಂದು ವಿಜಯಪುರದಲ್ಲಿ ಬಿಎಸ್ಪಿ ವಿಭಾಗ ಮಟ್ಟದ ಸಮಾವೇಶ
ವಿಜಯಪುರ, 10: ಸಂವಿಧಾನ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ ಬಹುಜನರ ನಡಿಗೆ ಪಾರ್ಲಿಮೆಂಟ್ ಕಡೆಗೆ ಕಾರ್ಯಕ್ರಮದ ಅಂಗವಾಗಿ ಮಾ. 11 ರಂದು ವಿಜಯಪುರ ಆಕಾಶವಾಣಿ ಕೇಂದ್ರದ ಹತ್ತಿರವಿರುವ ವಿಜಯ ಫಂಕ್ಷನ್ ಹಾಲ್ ನಲ್ಲಿ ವಿಭಾಗಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕಲ್ಲಪ್ಪ ತೊರವಿ, ವಿಜಯಪುರ ಜಿಲ್ಲಾ ಉಸ್ತುವಾರಿ ಕಾಶೀನಾಥ ದೊಡಮನಿ ವಕೀಲರು ಹೇಳಿದರು.
ಶನಿವಾರ ಈ ಕುರಿತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಸಹಸ್ರಾರು ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಿಎಸ್ಪಿ ಕರ್ನಾಟಕ ರಾಜ್ಯ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಾಮ್ ಜಿ. ಗೌತಮ್, ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಬಿಎಸ್ಪಿ ರಾಜ್ಯ ಸಂಯೋಜಕರಾದ ನಿತಿನ್ ಸಿಂಗ್, ಎಂ.ಗೋಪಿನಾಥ, ಎಂ.ಕೃಷ್ಣಮೂರ್ತಿ ಉಪಸ್ಥಿತರಿರುವರು. ವಿಜಯಪುರ ಜಿಲ್ಲಾ ಉಸ್ತುವಾರಿ ಕಾಶೀನಾಥ ತೊರವಿ ಅಧ್ಯಕ್ಷತೆ ವಹಿಸುವರು. ಬಿಎಸ್ಪಿ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲೆಯ ಉಸ್ತುವಾರಿಗಳು, ತಾಲೂಕಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸಂವಿಧಾನ ಜಾರಿಗೆ ಬಂದು ಹಲವು ದಶಕಗಳೇ ಕಳೆದರೂ ಇದುವರೆಗೆ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುತ್ತವೆ. ಅಧಿಕಾರಕ್ಕೆ ಬಂದ ನಂತರ ಅದನ್ನು ಮರೆತು ಬಿಡುತ್ತವೆ. ಯಾವ ಸರಕಾರವೂ ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ಬಹುಜನ ಸಮಾಜ ಪಕ್ಷ ಸಂವಿಧಾನ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಬಹುಜನರು ಈಗ ಜಾಗೃತರಾಗಿದ್ದಾರೆ ಎಂದರು.
28 ಕ್ಷೇತ್ರಗಳಿಗೂ
ಬಿಎಸ್ ಪಿ ಸ್ಪರ್ಧೆ :
ಮುಂಬರುವ ಲೋಕಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷವು ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೂ ಸ್ಪರ್ಧೆ ಮಾಡಲು ನಿರ್ಧರಿಸಿದ್ದು, ವಿಜಯಪುರ ಲೋಕಸಭಾ ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಹನಮಂತ ಬೊಮ್ಮನಜೋಗಿ, ಸಂಘಟನಾ ಕಾರ್ಯದರ್ಶಿ ನಿತೀಶ ತೊರವಿ, ಖಜಾಂಚಿ ಸುರೇಶ ಚೂರಿ ವಕೀಲರು ಹಾಗೂ ಇನ್ನಿತರ ಮುಖಂಡರುಗಳು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.