ಮಹಿಳಾ ದಿನಾಚರಣೆ: ಓಟದ ಸ್ಪರ್ಧೆ
ಬೀದರ್:ಮಾ.10: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನೆಹರೂ ಯುವ ಕೇಂದ್ರ ಹಾಗೂ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಶನಿವಾರ ಜಿಲ್ಲೆಯ ಮೂರು ಕಡೆಗಳಲ್ಲಿ 15 ವರ್ಷ ಮೇಲ್ಪಟ್ಟ ಯುವತಿಯರಿಗೆ ಓಟದ ಸ್ಪರ್ಧೆ ನಡೆಯಿತು.
ಬೀದರ್ ತಾಲ್ಲೂಕಿನ ಮಂದಕನಳ್ಳಿ, ಹುಮನಾಬಾದ್ ತಾಲ್ಲೂಕಿನ ಹುಡಗಿ ಹಾಗೂ ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು.
ಸ್ಪರ್ಧೆಯ ವಿಜೇತರಿಗೆ ಪದಕ, ಟೀ ಶರ್ಟ್, ಟೊಪ್ಪಿಗೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಮಂದಕನಳ್ಳಿಯಲ್ಲಿ ನಡೆದ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ. ರಿಯಾಜೊದ್ದಿನ್ ಮತ್ತಿತರರು ಪಾಲ್ಗೊಂಡಿದ್ದರು.