ಪ್ರತಿ ತಿಂಗಳು ಪಾಲಕರ ಸಭೆ ಕರೆಯಲು ಸೂಚನೆ
ಇಂಡಿ:ಮಾ.10:ತಾಲೂಕಿನ ಅಂಜುಟಗಿ ಗ್ರಾಮದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪುಂಡಲೀಕರ ಮಾನವರ ಭೇಟಿ ನೀಡಿ ವಸತಿ ನಿಲಯ ಹಾಗೂ ವಸತಿ ಶಾಲೆಯ ಕೋಣೆಗಳ ಸ್ವಚ್ಚತೆ ಹಾಗೂ ಪಾಠ ಬೋಧನೆ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.
ವಸತಿ ಶಾಲೆಯಲ್ಲಿನಲ್ಲಿ ಊಟ,ವಸತಿ ಹಾಗೂ ಶೌಚಾಲಯದ ಕೋಣೆಗಳು ಸ್ವಚ್ಚತೆಯಲ್ಲಿ ಇದ್ದು, ಪ್ಯಾನ್ ಸೇರಿದಂತೆ ಕುಡಿಯುವ ನೀರಿನ ಯಾವುದೇ ಕೊರತೆ ಕಂಡುಬಂದಿರುವುದಿಲ್ಲ. ಊಟ ಹಾಗೂ ಉಪಹಾರ ಸರಿಯಾಗಿ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಯಾವುದೇ ಸಮಸ್ಯೆ ಇದ್ದರೆ ನನಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಬಂದಿದ್ದೇನೆ ಎಂದು ಹೇಳಿದರು. ವಿಜ್ಞಾನ ಶಿಕ್ಷಕ ಸರಿಯಾಗಿ ಪಾಠ ಬೋಧನೆ ಮಾಡುವುದಿಲ್ಲ.ಅವರು ಪಾಠ ಬೋಧನೆ ಮಾಡಿದ್ದು ನಮಗೆ ತಿಳಿಯುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅದನ್ನು ಮುಂಬರುವ ಶೈಕ್ಷಣಿಕ ವರ್ಷ ಆರಂಭ ಆಗುವಷ್ಟರಲ್ಲಿ ವಿಜ್ಞಾನ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರು. ವಸತಿ ಶಾಲೆ ವಿದ್ಯಾರ್ಥಿನಿಯರ ವಸತಿ ಶಾಲೆ ಇರುವುದರಿಂದ ಇಲ್ಲಿ ಡಿ ಗ್ರೂಪ್ ನೌಕರರು ಹಾಗೂ ವಾರ್ಡನ್ ಸಹ ಮಹಿಳಾ ಸಿಬ್ಬಂದಿ ಇದ್ದರೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಈ ಕುರಿತು ಕ್ರೈಸ್ ಮಂಡಳಿಗೆ ಪತ್ರ ಬರೆಯುವುದಾಗಿ ಹೇಳಿದರು.
ವಸತಿ ಶಾಲೆಯ ಪ್ರಾಚಾರ್ಯರು ಎಲ್ಲ ಶಿಕ್ಷಕ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ನಿರ್ವಹಿಸಬೇಕು. ಪ್ರಾಚಾರ್ಯ ಸಂಸ್ಥೆಯ ಯಜಮಾನ ಇದ್ದಂತೆ, ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಜಿಲ್ಲೆಯಲ್ಲಿಯೇ ಅಂಜುಟಗಿ ವಸತಿ ಶಾಲೆ ಉತ್ತಮವಾಗಿದೆ ಎನ್ನುವಂತೆ ಹೆಸರು ಪಡೆಯುವ ಹಾಗೆ ನೋಡಿಕೊಳ್ಳಬೇಕು. ಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯೂ ಅನುತ್ತೀರ್ಣ ಆಗಕೂಡದು.ಸರ್ಕಾರ ಮಕ್ಕಳ ಬೋಧನೆ,ಊಟ,ವಸತಿಗಾಗಿ ಸಾಕಷ್ಟು ಅನುಧಾನ,ಅನುಕೂಲ ಕಲ್ಪಿಸಿಕೊಡುತ್ತಿದೆ.ವಸತಿ ಶಾಲೆ,ವಸತಿ ನಿಲಯದಲ್ಲಿ ಇರುವ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಅನುತ್ತೀರ್ಣರಾದರೆ ಏನು ಪ್ರಯೋಜನ.ವಸತಿ ಶಾಲೆಯ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಅನುತ್ತೀರ್ಣರಾಗುತ್ತಾರೋ ಆ ವಿಷಯದ ಶಿಕ್ಷಕ ಹಾಗೂ ಪ್ರಾಂಶುಪಾಲರೇ ನೇರ ಹೊಣೆಗಾರರು.ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಪ್ರಾಂಶುಪಾಲರಿಗೆ ತಾಕೀತು ಮಾಡಿದರು. ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆಯಬೇಕು. ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಪಾಲಕರ ಮುಂದೆ ಇಡಬೇಕು.ಪಾಲಕರು,ಮಕ್ಕಳು ಹಾಗೂ ವಸತಿ ಶಾಲೆಯ ಶಿಕ್ಷಕರ ಮಧ್ಯ ಉತ್ತಮ ಬಾಂಧವ್ಯ ರೂಪಿಸುವಂತ ವಾತಾವರಣ ನಿರ್ಮಾಣ ಮಾಡಬೇಕು. ಬದ್ರತೆ ಉತ್ತಮಗೊಳಿಸಬೇಕು ಎಂದು ಪ್ರಾಂಶುಪಾಲರಿಗೆ ಸೂಚಿಸಿದರು.
ಪ್ರಾಂಶುಪಾಲ ಚನ್ನಪ್ಪ ಶೇಠೆ,ವಾರ್ಡನ್ ಸಂಜೀವ ಹಿರೋಳ,ಗ್ರಾಪಂ ಅಧ್ಯಕ್ಷ ಬಸವರಾಜ ಕವಡಿ ಈ ಸಂದರ್ಭದಲ್ಲಿ ಇದ್ದರು.