ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡವಿರಲಿ:ಕರವೇ ಆಗ್ರಹ
ಕೆಂಭಾವಿ:ಮಾ.10:ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.
ಈ ಕುರಿತು ಗುರುವಾರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಕರವೆ ಮುಖಂಡ ಶ್ರೀಶೈಲ್ ಕಾಚಾಪೂರ, ಕರ್ನಾಟಕದಲ್ಲಿ ಕನ್ನಡ ನಮಫಲಕಗಳನ್ನು ಇರಬೇಕು ಎಂಬ ಹಕ್ಕೊತ್ತಾಯವನ್ನು ಇಟ್ಟುಕೊಂಡು ರಕ್ಷಣಾ ವೇದಿಕೆ ನಿರ್ಣಾಯ ಚಳುವಳಿಯನ್ನು ಕೈಗೊಂಡು ಅದರಲ್ಲಿ ಯಶಸ್ಸಯನ್ನು ಕಂಡಿದೆ. ಕನ್ನಡ ನಮಗೇಕೆ ಬೇಕು ಎಂಬ ದರ್ಪದಿಂದ ಬಲಿತುಕೊಂಡಿದ್ದ ಪರಭಾಷಿಕ ಉದ್ಯಮಿಗಳಿಗೆ ಪಾಠ ಕಲಿಸುವ ಕೆಲಸವನ್ನು ನಮ್ಮ ರಕ್ಷಣಾ ವೇದಿಕೆ ಮಾಡಿದೆ. ಅದರಂತೆ ಬೆಂಗಳೂರು ಮಹಾನಗರದಲ್ಲಿ ಬೃಹತ್ ಚಳುವಳಿ ನಡೆಸಿದರ ಫಲವಾಗಿ ಅದೆಷ್ಟೊ ಅನ್ಯ ಭಾಷಿಕ ನಾಮಫಲಕಗಳು ಧರೆಗುರುಳಿ ಕನ್ನಡ ಡಿಂಡಿಮ ಬಾರಸಿದೆವು.
ಇದರ ಫಲವಾಗಿ ಸರಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತಂದು ಉಭಯ ಸದನಗಳಲ್ಲಿ ಅನುಮೋದನೆಯನ್ನೂ ಪಡೆದುಕೊಂಡಿತು. ಇದಕ್ಕೆ ನಮ್ಮ ಕರವೇ ಕಾರ್ಯಕರ್ತರ ಶ್ರಮ ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ಕನ್ನಡ ನಾಮಫಲಕ ಕಡ್ಡಾಯ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಮಳಿಗೆಗಳಲ್ಲಿ ಮುಂದಿನ ಮಾ.15 ರ ಒಳಗಾಗಿ ಶೇ.60 ರಷ್ಟು ಕನ್ನಡ ನಾಮಫಲಗಳು ಗೋಚರಿಸುವಂತೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರಕ್ಷಣಾ ವೇದಿಕೆ ವತಿಯಿಂದ ಪುರಸಭೆ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ವಲಯಾಧ್ಯಕ್ಷ ಕುಮಾರ ಮೋಪಗಾರ, ಮಲ್ಲಿಕಾರ್ಜುನ ಸ್ವಾಮಿ ಪರಸನಹಳ್ಳಿ, ದೇವು ಹಡಪದ, ಸುರೇಶ ಮಾಳಳ್ಳಿಕರ್, ರಮೇಶ ಚಿಂಚೋಳಿ, ಮಲ್ಲನಗೌಡ ಕದ್ನಳ್ಳಿ, ಸಾಯಬಣ್ಣ ಎಂಟಮಾನ, ದೇವೇಂದ್ರ ಭಜಂತ್ರಿ, ಅಂಬಯ್ಯ ಬಡಿಗೇರ, ಮನು, ಸಿದ್ದು ಜೋಗೇರ, ವಿಠ್ಠಲ ವಾಸ್ಟರ್ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.