ಗ್ರಾಜುಯೇಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.17:- ಪದವೀಧರ ವಿದ್ಯಾವಂತರ ಸಂಕಷ್ಟಗಳಿಗೆ ನೆರವಾಗುವ ಉದ್ದೇಶದಿಂದ ಸ್ಥಾಪಿತವಾದ ಕೃಷ್ಣರಾಜಪೇಟೆ ಗ್ರಾಜುಯೇಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಳೆದ ಒಂದು ದಶಕದಿಂದ ಉತ್ತಮ ಸೇವೆ ಸಲ್ಲಿಸಿಕೊಂಡು ಬಂದಿದ್ದು ಲಾಭದ ಹಾದಿಯಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ಅಂ.ಚಿ.ಸಣ್ಣಸ್ವಾಮೀಗೌಡ ಹೇಳಿದರು.
ಪಟ್ಟಣದ ರಾಮ್‍ದಾಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷ್ಣರಾಜಪೇಟೆ ಗ್ರಾಜ್ಯುಯೇಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪದವೀಧರರು ಇದ್ದು ಅವರುಗಳಿಗೆ ಉಪಯೋಗವಾಗಲೆಂದು ಈ ಸೊಸೈಟಿಯನ್ನು ಸ್ಥಾಪಿಸಲಾಗಿದೆ. ನಿರುದ್ಯೋಗಿ ಪದವೀಧರರು ಉತ್ತಮ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಆರ್ಥಿಕ ನೆರವನ್ನು ನೀಡುವುದು ನಮ್ಮ ಸೊಸೈಟಿಯ ಮೂಲ ಆಶಯ. ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಪಡೆದಿರುವ ಯುವಜನಾಂಗ ಸೊಸೈಟಿಯ ಸದಸ್ಯತ್ವ ಪಡೆದು ತಾವು ಪಡೆದ ಸಾಲದ ಹಣವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ ಅಂಚಿ.ಸಣ್ಣಸ್ವಾಮೀಗೌಡ ಕಳೆದ ಸಾಲಿನಲ್ಲಿ ಸೊಸೈಟಿ ಹಲವು ರೀತಿಯಲ್ಲಿ ಷೇರುದಾರರಿಗೆ ಸೇವಾ ಸೌಲಭ್ಯ ನೀಡಿ ರೂ: 4.95,593 ಲಕ್ಷ ಲಾಭಗಳಿಸಿದೆ.
ಬಾಂಕಿನಲ್ಲಿ 24.28 ಲಕ್ಷ ಷೇರು ಧನವಿದ್ದು ಒಟ್ಟು 69.79 ಲಕ್ಷ ವಹಿವಾಟು ನಡೆಸಿದೆ.ಈ ಬಾರಿಯಿಂದ ಸಹಕಾರ ಸಂಘಗಳ ಕಾಯ್ದೆ ಪ್ರಕಾರ 5 ವಾರ್ಷಿಕ ಸಭೆಯಲ್ಲಿ ಕನಿಷ್ಟ 3 ಸಭೆಗೆ ಹಾಜರಾಗದಿದ್ದರೆ ಮತ್ತು ಕನಿಷ್ಟ ಆರ್ಥಿಕ ವ್ಯವಹಾರವನ್ನು ಷೇರುದಾರರು ನಡೆಸದಿದ್ದರ ಅವರಿಗೆ ಮತದಾನ ಮಾಡುವ ಹಕ್ಕು ಇರುವುದಿಲ್ಲ. ಆದ್ದರಿಂದ ಷೇರುದಾರರು ಮತದಾನದ ಹಕ್ಕು ಉಳಿಸಿಕೊಳ್ಳಬೇಕಾದರೆ ಆರ್.ಡಿ ಖಾತೆಯನ್ನು ತೆರೆದು ವ್ಯವಹಾರ ನಡೆಸಬೇಕೆಂದು ಮನವಿ ಮಾಡಿದರು.
ಕನಿಷ್ಟ ಆರ್ಥಿಕ ವ್ಯವಹಾರ ಸಭೆಯಲ್ಲಿ ಬಿಸಿಬಿಸಿ ಚರ್ಚೆ:
ವಾರ್ಷಿಕ ಸಭೆಗೆ ಹಾಜರಾಗಿದ್ದರೂ ಆರ್ಥಿಕ ವ್ಯವಹಾರ ಮಾಡದಿದ್ದರೆ ಮತದಾನದ ಹಕ್ಕು ಇರುವುದಿಲ್ಲ ಎನ್ನುವ ಸಹಕಾರ ಇಲಾಖೆಯ ನಿಯಮದ ವಿರುದ್ದ ಸಭೆಯಲ್ಲಿ ಷೇರುದಾರರು ಆಕ್ಷೇಪ ವ್ಯಕ್ತಪಡಿಸಿದರು. ಸಂಘದ ಅಭಿವೃದ್ದಿಯ ದೃಷ್ಠಿಯಿಂದ ನಾವು ಷೇರುದಾರರಾಗಿದ್ದೇವೆ. ನಮಗೆ ಸಾಲದ ಅಗತ್ಯವಿಲ್ಲ. ಸಾಲ ಪಡೆಯುವುದನ್ನು ಹೊರತುಪಡಿಸಿ ಮತ್ಯಾವ ರೀತಿಯ ಆರ್ಥಿಕ ವ್ಯವಹಾರ ನಡೆಸಬೇಕೆಂಬ ಸೂಚನೆ ನೀಡದೆ ಏಕಾಏಕಿ ನಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಎಚ್.ಬಿ.ಭರತ್ ಕುಮಾರ್ ಇದು ಸರ್ಕಾರದ ನೀತಿಯಾಗಿದೆ. ಷೇರುದಾರರು ಸೊಸೈಟಿಗಳಲ್ಲಿ ಯಾವುದೇ ರೀತಿಯಲ್ಲಾದರೂ ಆರ್ಥಿಕ ಚಟುವಟಿಕೆ ನಡೆಸುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆ ಷೇರುದಾರರು ನ್ಯಾಯಾಲಯದಲ್ಲಿಯೂ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಈ ಸಂಭಂದ ಕಾಯ್ದೆಗೆ ತಿದ್ದುಪಡಿ ತರಲು ಶಾಸನ ರೂಪಿಸಿ ರಾಜ್ಯಪಾಲರ ಅನುಮೋದನೆಗೆ ಹೋಗಿದೆ. ಕಾಯ್ದೆ ಜಾರಿಯಾಗುವವರೆವಿಗೆ ಈ ಕಾನೂನು ಅನ್ವಯವಾಗಲಿದೆ. ಆದ್ದರಿಂದ ಷೇರುದಾರರು ಸೊಸೈಟಿಯ ಆರ್ಥಿಕಾಭೀವೃದ್ದಿಗಾಗಿ ಪಿಗ್ಮಿ, ಆರ್.ಡಿ, ಸಾಲ ಪಡೆಯುವುದು ಹಾಗೂ ಸಕಾಲದಲ್ಲಿ ಸಾಲ ಕಟ್ಟುವುದು ಸೇರಿದಂತೆ ಹಲವು ವ್ಯವಹಾರ ನಡೆಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪದ್ಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಶಿಕ್ಷಣ ಇಲಾಖೆಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ನಿರ್ದೇಶಕರಾದ ಮರಿಸ್ವಾಮೀಗೌಡ, ಎಸ್.ನಾಗರಾಜು, ಶಿವನಂಜಯ್ಯ, ಪುಟ್ಟಸ್ವಾಮಿ, ಉದೇಶ್‍ಗೌಡ, ಎಂ.ಎನ್. ದೇವರಾಜು, ವಿ.ಕೆ.ಸ್ವರೂಪ, ಕಾರ್ಯದರ್ಶಿ ಲಕ್ಷ್ಮಿ ಮಂಜೇಗೌಡ, ಸೊಸೈಟಿಯ ಸಹಾಯಕಿ ನಗ್ಮಾಬಾನು ಸೇರಿದಂತೆ ಸಂಘದ ನೂರಾರು ಷೇರುದಾರರು ಇದ್ದರು.