ಸಮುದಾಯದ ಒಳಿತಿಗೆ ಪಕ್ಷಾತೀತವಾಗಿ ಶ್ರಮಿಸೋಣ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.17:- ಸಮುದಾಯದ ಅಭಿವೃದ್ಧಿಗೆ ಪಕ್ಷಾತೀತವಾಗಿ ಭಿನ್ನಾಭಿಪ್ರಾಯ ಬದಿಗಿರಿಸಿ ಕೆಲಸ ಮಾಡೋಣ ಎಂದು ಪಶು ಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದ ಆವರಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ನಾಡಪ್ರಭು ಕೆಂಪೇಗೌಡ ಜಯಂತಿಯ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ ಒಳಿತಿಗೆ ನಡೆಯುವ ಕೆಲಸಗಳಲ್ಲಿ ಹಿಂದೇಟು ಹಾಕಬಾರದು. ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅಣತೆಯನ್ನು ಆದಿಚುಂಚನಗಿರಿ ಮಠದ ಪರವಾಗಿ ಕೆಲಸ ಮಾಡುತ್ತಿರುವೆ ಎಂದರು.
ಹಳೆ ಮೈಸೂರು ಭಾಗವಲ್ಲದೇ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಉಪ ಪಂಗಡಗಳಾಗಿ ಹಂಚಿ ಹೋಗಿದ್ದಾರೆ. ಹೀಗಾಗಿ ಎಲ್ಲ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಸಂಘಕ್ಕೆ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ರಾಜ್ಯಾಧ್ಯಕ್ಷ ಗಂಗಾಧರ ಗೌಡ ಸಮುದಾಯವನ್ನು ಕಟ್ಟುವ ಕೆಲಸ ಮಾಡಲಿ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ನಮ್ಮ ಅಸ್ಮಿತೆ, ಅಸ್ತಿತ್ವ, ಸ್ವಾಭಿಮಾನ ಕ್ಷೀಣಿಸುತ್ತಿದೆ. ಸಣ್ಣ ಜಾತಿಯನ್ನು ಬೈದರು ಪ್ರತಿಕ್ರಿಯೆ ಕೊಡುತ್ತಾರೆ. ಆದರೆ, ಹಿಂದೂ ಧರ್ಮವನ್ನು ನಿಂದಿಸಿದರೂ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಇಂತಹ ಧೋರಣೆ ಹೊಂದಿರುವ ಮಾನಸಿಕತೆ ಅತ್ಯಂತ ಅಪಾಯಕಾರಿ. ಸನಾತನ ಧರ್ಮ ಬಲವಾಗಿದ್ದರೆ ಒಕ್ಕಲಿಗರು, ಕುರುಬರು, ಲಿಂಗಾಯರು, ದಲಿತರು ಸೇರಿ ಎಲ್ಲ ಜಾತಿಗಳು ಸುರಕ್ಷಿತವಾಗಿರಲಿವೆ ಎಂದು ಹೇಳಿದರು.
ಹಿಂದೆ ಒಕ್ಕಲಿಗರು ಕೃಷಿ ಭೂಮಿಯನ್ನು ಮಾರುತ್ತಿರಲಿಲ್ಲ. ಈಗ ಮಾರುವ ಸಾಲಿನಲ್ಲಿ ಮೊದಲಿಗರು ಒಕ್ಕಲಿಗರಾಗಿದ್ದಾರೆ. ರೈತರು ಕನಿಷ್ಠ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ನೇಗಿಲ ಯೋಗಿಗಳು ಮದುವೆಗಾಗಿ ಕಾಯುತ್ತಿದ್ದಾರೆ. ಆದರೆ, ಸಮುದಾಯದ ಕೆಲ ಹೆಣ್ಣು ಮಕ್ಕಳು ಲವ್ ಜಿಹಾದಿಗೆ ಒಳಗಾಗಿ ಬದುಕು ಕಳೆದುಕೊಳ್ಳುತ್ತಿದ್ದಾರೆ. ಒಕ್ಕಲಿಗರು ಹೇಡಿಗಳಿಂದ ಪ್ರಚೋದನೆ ಪಡೆಯಬಾರದು ಎಂದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಅಂದಿನ ಕಾಲದಲ್ಲಿ ಸಮುದಾಯದಲ್ಲಿ ಹೆಚ್ಚು ವಿದ್ಯಾಂತರು ಇರಲಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿವಿ ಕುಲಪತಿಯಾದಾಗ ಒಕ್ಕಲಿಗರ ವಿದ್ಯಾಭ್ಯಾಸಕ್ಕೆ ನೀಡಿದ ಪ್ರೇರಣೆ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಮುದಾಯ ಕಾಳಜಿಯಿಂದ ಪ್ರಸ್ತುತ ಎಲ್ಲ ರಂಗದಲ್ಲಿಯೂ ಬೃಹದಾಕಾರದಲ್ಲಿ ಒಕ್ಕಲಿಗರು ಗುರುತಿಸಿಕೊಂಡಿದ್ದಾರೆ. ಗುಲ್ಬರ್ಗ, ರಾಯಚೂರು ಹಾಗೂ ಉತ್ತರ ಕರ್ನಾಟಕ ಕೂಡು ಒಕ್ಕಲಿಗರಿದ್ದು, ಇವರನ್ನು ಸಂಘಟಿಸಬೇಕು ಎಂದು ಹೇಳಿದರು.
ಆದರ್ಶ ದಂಪತಿ: ಹಿರಿಯ ದಂಪತಿಗಳಾದ ಗೋವಿಂದೇಗೌಡ ಮತ್ತು ಜಯಮ್ಮ, ಉದ್ಯಮಿ ಸಿ.ವೈ.ಶಿವೇಗೌಡ ಮತ್ತು ಉಮಾರಾಣಿ ಶಿವೇಗೌಡ, ಡಾ.ರಾಜಶೇಖಕರ್ ಮತ್ತು ಡಾ.ಲತಾ ರಾಜಶೇಖರ್, ಶ್ರೀಂಕಠಯ್ಯ ಮತ್ತು ಶಾಂತಮ್ಮ, ಹೋಟೆಲ್ ಉದ್ಯಮಿ ಮಂಜುನಾಥ್ ಮತ್ತು ವಿಜಯ, ಶಿವಶಂಕರ್ ಮತ್ತು ಉಮಾದೇವಿ
ದಂಪತಿಗೆ ಆದರ್ಶ ಒಕ್ಕಲಿಗ ದಂಪತಿ ಪ್ರಶಸ್ತಿ ಪ್ರಶಸ್ತಿ ನೀಡಲಾಯಿತು.
20 ಮಂದಿಗೆ ಸೇವಾ ರತ್ನ ಪ್ರಶಸ್ತಿ: ಲೇಖಕ ಸಿ.ಪಿ.ಕೃಷ್ಣಕುಮಾರ್, ಡಿ.ಮಾದೇಗೌಡ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪೆÇ್ರ.ಆರ್.ಅನುರಾಧ ಪಟೇಲ್, ಪ್ರಗತಿಪರ ರೈತ ಎಂ.ಸಿ.ರಂಗಸ್ವಾಮಿ, ವೈದ್ಯ ಶುಶ್ರುತ್ ಗೌಡ, ಬಿಜೆಪಿ ಮುಖಂಡ ಇ.ಸಿ.ನಿಂಗರಾಜೇಗೌಡ, ಲಿಂಗಪ್ಪ, ಕೆಎಎಸ್ ಅಧಿಕಾರಿ ಶೈಲಾ ರವಿಕುಮಾರ್, ಉದ್ಯಮಿ ಸಿ.ನಾರಾಯಣಗೌಡ, ಲಯನ್ ದೇವೇಗೌಡ, ಕೃಷಿ ವಿಜ್ಞಾನಿ ವಸಂತಕುಮಾರ್ ತಿಮಕಾಪುರ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಪಿ.ಶಂಕರೇಗೌಡ, ಶಿಕ್ಷಣ ಸೇವೆಗೆ ದತ್ತೇಶ್ ಕುಮಾರ್, ಚಿತ್ರಕಲಾ ನಾಗರಾಜು, ಉದ್ಯಮಿ ಗೋಪಾಲಸ್ವಾಮಿ, ವಿ.ಸಿ.ರವಿಕುರ್ಮಾ, ಕಾಂಗ್ರೆಸ್ ಮುಖಂಡ ಕೆ.ದಿನೇಶ್, ರಾಜೂಗೌಡ, ಚಲುವರಾಜು, ಪತ್ರಕರ್ತ ರವಿಪಾಂಡವಪುರ ಅವರು ಪ್ರಶಸ್ತಿ ಸ್ವೀಕರಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಾಜಿ ಸಚಿವ ಅಶ್ವತ್ಥ್ ನಾರಾಯಣ, ಮಾಜಿ ಸಂಸದ ಪ್ರತಾಪ ಸಿಂಹ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಗೌಡ, ಬಿಜೆಪಿ ಮುಖಂಡ ಜಯಪ್ರಕಾಶ್ (ಜೆಪಿ), ವಿಧಾನ ಪರಿಷತ್ ಮಾಜಿ ಸದಸ್ಯ ಮಾದೇಗೌಡ, ಎಪಿಎಸ್ ಅಧಿಕಾರಿ ಎನ್.ಪ್ರಕಾಶ್ ಗೌಡ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಡಾ.ಶ್ರುಶ್ರೂತ್ ಗೌಡ ಇನ್ನಿತರರು ಹಾಜರಿದ್ದರು.