ಮುನಿರತ್ನರ ರಾಜೀನಾಮೆಗೆ ಪುಷ್ಪಾ ಅಮರ್‍ನಾಥ್ ಆಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.17:- ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಜಾತಿ ನಿಂದನೆ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ. ಜೊತೆಗೆ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಇದು ಬಿಜೆಪಿಯವರ ಬೂಟಾಟಿಕೆ ತೋರುತ್ತದೆ. ಈಗಲೂ ಸುಮ್ಮನಿರುವ ರಾಜ್ಯಪಾಲರು ಮುನಿರತ್ನ ಅವರ ರಾಜೀನಾಮೆ ಪಡೆಯಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರ್‍ನಾಥ್ ಆಗ್ರಹಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹೆಣ್ಣು ಮಕ್ಕಳು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಟ್ಟಿದ್ದಾರೆಯೇ ಎಂಬ ಪ್ರಶ್ನೆ ಮುನಿರತ್ನ ಅವರ ಮಾತುಗಳಿಂದ ಉದ್ಭವವಾಗಿದೆ. ಚುನಾವಣೆ ವೇಳೆ ಎಲ್ಲಾ ಜಾತಿಯವರ ಮತ ಬೇಕು ಎನ್ನುವ ಅವರು ಬಳಿಕ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಘಟನೆ ಬಗ್ಗೆಯೂ ಮಾತನಾಡುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಗ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿ, ಮುನಿರತ್ನ ಅವರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡಬಾರದು. ಬಿಜೆಪಿಯವರಿಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮೋದಾಮಣಿ, ರಾಧಾಮಣಿ, ಸುಶೀಲಾ ಮರಿಗೌಡ ಉಪಸ್ಥಿತರಿದ್ದರು.