ಮುಡಾ ಹಗರಣದಲ್ಲಿ ವಿಜೆಯೇಂದ್ರ ತಂಡ: ಶಿವರಾಮ್
ಸಂಜೆವಾಣಿ ನ್ಯೂಸ್
ಮೈಸೂರು: ಸೆ.17:- ಮೈಸೂರಿನ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಹಾಗೂ ಬಿ.ವೈ.ವಿಜಯೇಂದ್ರರ ಆಪ್ತ ಎಲ್.ಆರ್. ಮಹದೇವಸ್ವಾಮಿ ಅಕ್ರಮವಾಗಿ ಹೆಚ್ಚುವರಿ ನಿವೇಶನ ಖರೀದಿ ಮಾಡಿ ಪತ್ನಿ ಹೆಸರಿಗೆ 7ಕೋಟಿ ರೂ. ಮೌಲ್ಯದ ಆಸ್ತಿಯನ್ನ 5,36 ಲಕ್ಷ ರೂ ಗಳಿಗೆ ಪಡೆದಿದ್ದಾರೆ ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿ ಅವರು, ಮೈಸೂರಿನ ಈರನಗೆರೆ ಸರ್ವೆ ನಂ.85/2ರ ವಿಸ್ತೀರ್ಣ 1.3 ಗುಂಟೆ ಜಾಗದಲ್ಲಿ ಬಹಳ ತಂತ್ರಗಾರಿಕೆ ಮಾಡಿ ನಿವೇಶನ ಪಡೆದುಕೊಂಡಿದ್ದು, ಈ ಹಿಂದಿನ ಮುಡಾ ಆಯುಕ್ತ ಡಿ.ಬಿ.ನಟೇಶ್ ಅಕ್ರಮವಾಗಿ ಈ ನಿವೇಶನವನ್ನು 50:50 ಅನುಪಾತದಲ್ಲಿ ಮಂಜೂರು ಮಾಡುವ ಮೂಲಕ ಅಕ್ರಮದಲ್ಲಿ ಬಾಗಿಯಾಗಿದ್ದಾರೆ. ಇವರ ಜೊತೆಗೆ ಮೈಸೂರು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಭಾಗಿಯಾಗಿದ್ದು, ಯಾವ ನೈತಿಕತೆ ಇಟ್ಕೊಂಡು ಪಾದಯಾತ್ರೆ ಮಾಡ್ತೀರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಪ್ರಶ್ನಿಸಿದರು.
ಈರನಗೆರೆಯ ಸರ್ವೆ ನಂ.85/2ರ ವಿಸ್ತೀರ್ಣ 1.3ಗುಂಟೆ ಜಾಗವನ್ನು ಮುಡಾವು 1974-75ರಲ್ಲಿ ಸ್ವಾಧೀನ ಪಡಿಸಿಕೊಂಡಿದೆ. ಆದರೆ, 47 ವರ್ಷಗಳ ನಂತರ ಈ ಸ್ಥಳಕ್ಕೆ ಲೇಟ್ ಸೈಯದ್ ಅಬ್ದುಲ್ ರೆಹಮಾನ್ ಅವರು ಮೂಲ ವಾರಸುದಾರರೆಂದು ಹೇಳಿಕೊಂಡು ಸೈಯದಾ ನುಸ್‍ರತ್ ಅಪ್ಜ ಮತ್ತು ಸೈಯದ್ ಶಕೀಬ್ ಉರ್ ರಹಮಾನ್ ಎಂಬುವರು ಈ ಜಾಗಕ್ಕೆ ಬದಲಿ ನಿವೇಶನ ನೀಡುವಂತೆ ಕೋರಿ 2021ರ ಜು.7ರಂದು ಮುಡಾಗೆ ಅರ್ಜಿ ಸಲ್ಲಿಸಿರುತ್ತಾರೆ. ಈ ಅರ್ಜಿಯ ಕೋರಿಕೆ ಮೇರೆಗೆ ಆ.13ರಂದು ನಡೆದ ಸಭೆಯಲ್ಲಿ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿರುವ ನಿವೇಶನವನ್ನು ಭೂ ಪರಿಹಾರ ರೂಪದಲ್ಲಿ ನೀಡಲು ಸಭೆ ತೀರ್ಮಾನಿಸುತ್ತದೆ. ಈ ತೀರ್ಮಾನದಂತೆ 2022ರ ಮಾ.29ರಲ್ಲಿ ಮುಡಾ ಆಯುಕ್ತರು ಅವರ ಆದೇಶದಂತೆ ಮಾ.31ರಂದು ಬದಲಿ ನಿವೇಶನ ಒಟ್ಟು ವಿಸ್ತೀರ್ಣ 12,057 ಚದರಡಿ ಮಧ್ಯಂತರ ನಿವೇಶನವನ್ನು ಪರಿಹಾರತ್ಮಕವಾಗಿ ಸೈಯದಾ ನುಸ್‍ರತ್ ಅಪ್ಜ ಮತ್ತು ಸೈಯದ್ ಶಕೀಬ್ ಉರ್ ರಹಮಾನ್ ಅವರಿಗೆ ಮಂಜೂರು ಮಾಡಿ ಆದೇಶಿಸಿರುತ್ತಾರೆ. 12,057 ಚದರಡಿ ನಿವೇಶನವನ್ನು ಮಂಜೂರು ಮಾಡಿದ್ದಲ್ಲದೆ, ಹೆಚ್ಚುವರಿಯಾಗಿ ಮೈಸೂರು ನಗರದ ಸರಸ್ವತಿಪುರಂ ವೆಸ್ಟ್ ಆಫ್ ತೊಣಚಿಕೊಪ್ಪಲು 4ನೇ ಹಂತದಲ್ಲಿರುವ ನಿವೇಶನ ಸಂಖ್ಯೆ 1311/ಜಿ ಅಳತೆ 50*80 ಅಡಿಗಳುಳ್ಳ ನಿವೇಶನವನ್ನು ಕೇವಲ 5,35,200 ರೂ,ಗಳನ್ನು ಅವರುಗಳಿಂದ ಪಾವತಿಸಿಕೊಂಡು ನಿವೇಶನವನ್ನು ಮಂಜೂರು ಮಾಡಿ ಮಾ.30ರಂದು ಮರು ಮಂಜೂರಾತಿ ಮಾಡಿದ್ದಾರೆ ಎಂದರು.
ಮುಡಾವು ಮೇ.12ರಂದು ಮರು ಕ್ರಯಪತ್ರ ನೀಡಿದ್ದು, ಈ ಬಗ್ಗೆ ಹೆಚ್ಚುವರಿ ಜಿಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿದೆ. ಸೈಯದಾ ನುಸ್‍ರತ್ ಅಪ್ಜ ಮತ್ತು ಸೈಯದ್ ಶಕೀಬ್ ಉರ್ ರಹಮಾನ್ ಅವರು ನಿವೇಶನ ಪಡೆದುಕೊಂಡ ನಂತರ ಎಲ್.ಆರ್.ಮಹದೇವಸ್ವಾಮಿ ಅವರ ಪತ್ನಿ ಸೌಮ್ಯ ಅವರಿಗೆ ಸೆ.19ಕ್ಕೆಮರು ನೋಂದಣಿ ಶುದ್ಧ ಕ್ರಯಪತ್ರದ ಮೂಲಕ ಕ್ರಯಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಮತ್ತು ಎಲ್.ಆರ್.ಮಹದೇವಸ್ವಾಮಿ ಪೂರ್ವ ನಿಯೋಜಿತವಾಗಿ ಹೆಚ್ಚುವರಿ ನಿವೇಶನವನ್ನು ಸೈಯದಾ ನುಸ್‍ರತ್ ಅಪ್ಜ ಮತ್ತು ಸೈಯದ್ ಶಕೀಬ್ ಉರ್ ರಹಮಾನ್ ಅವರಿಗೆ ಮಂಜೂರು ಮಾಡಿಸಿ, ಅದನ್ನು ಎಲ್.ಆರ್.ಮಹದೇವಸ್ವಾಮಿ ಅವರ ಪತ್ನಿ ಸೌಮ್ಯ ಹೆಸರಿಗೆ ಕ್ರಯಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ, ಮುಡಾ ಭ್ರಷ್ಟಾಚಾರದ ಪಿತಾಮಹ ಬಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಟಾಲಮ್ ಆದ ಡಿ.ಬಿ.ನಟೇಶ್ ಮತ್ತು ಮಹದೇವಸ್ವಾಮಿ 2021ರಲ್ಲಿ ಭ್ರಷ್ಟಾಚಾರ ಮಾಡಿದ್ದು, ಇವರಿಬ್ಬರು ದೇವಸ್ಥಾನಗಳಿಗೆ ಹೆಲಿಕಾಪ್ಟರ್‍ನಲ್ಲಿ ಹೋಗುತ್ತಿದ್ದರು.
ಮುಂದುವರೆದು ಮೈಸೂರಲ್ಲಿ ಇವರಿಬ್ಬರು ಸೇರಿ ದೊಡ್ಡ ನಿವೇಶನದಲ್ಲಿ ಫೈ ಸ್ಟಾರ್ ಹೋಟಲ್ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಮಹದೇವಸ್ವಾಮಿ ವಿರುದ್ಧ ಸಾಕಷ್ಟು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ ಎಂದರು.
ವಿಜಯೇಂದ್ರ ಕಿಚನ್ ಟೀಂನ ಮತ್ತೊಬ್ಬ ಸದಸ್ಯರಾದ ನಂದೀಶ್ ಹಂಚೆ ಅವರು ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದಾರೆ. ಬಸವಲಿಂಗಪ್ಪ ಎಂಬುವರಿಗೆ ನಾಚನಹಳ್ಳಿ, ಕೊಪ್ಪಲೂರು 3ನೇ ಹಂತ, ಸಿ ವಲಯ, ಬಡಾವಣೆಯಲ್ಲಿ ನಿವೇಶನ ಸಂಖ್ಯೆ 217/ಎ ನಿವೇಶನವು ಮಂಜೂರಾಗಿದ್ದು, ಈ ನಿವೇಶನವನ್ನು ಬಸವಲಿಂಗಪ್ಪ ಅವರು ಎಂ.ಎನ್.ನಂದೀಶ್ ಅವರಿಗೆ ಶುದ್ಧ ಕ್ರಯಕ್ಕೆ ಮಾರಾಟ ಮಾಡಿದ್ದಾರೆ ಎಂದು ಪ್ರಾಧಿಕಾರಕ್ಕೆ ತಿಳಿಸಿ ಪ್ರಾಧಿಕಾರದಿಂದ ಈ ನಿವೇಶನದ ಪ್ರದೇಶದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇರುವುದಾಗಿ ನಮೂದಿಸಿ ಕಾನೂನು ಬಾಹಿರವಾಗಿ ಬದಲಿಯಾಗಿ ಹಂಚ್ಯಾ ಸಾತಗಳ್ಳಿ ಬಿ ಬಡಾವಣೆಯಲ್ಲಿರುವ 36ನೇ ಸಂಖ್ಯೆಯಲ್ಲಿರುವ ನಿವೇಶನವನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಅಕ್ರಮವಾಗಿ ನಿವೇಶನ ಪಡೆದುಕೊಳ್ಳುವ ಮೂಲಕ ಮುಡಾಗೆ ಕೋಟ್ಯಾಂತರ ರೂ ನಷ್ಟ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಈ ಎಲ್ಲಾ ನಿವೇಶನಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.