ಹೈದರಾಬಾದ್ ಹೋರಾಟ ಪಠ್ಯವಾಗಬೇಕು
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17: ಇಡೀ ದೇಶ 1947 ಆಗಸ್ಟ್ 15ರಂದು ಸ್ವತಂತ್ರ ದೇಶವಾಗಿ ನಮ್ಮದೇ ಧ್ವಜಾರೋಹಣ ಉತ್ಸವ ನೆರವೇರಿಸುತ್ತಿದ್ದಾಗ ಹೈದರಾಬಾದ್ ಭಾಗವಾಗಿದ್ದ ಈಶಾನ್ಯ ಕರ್ನಾಟಕ ನಿಜಾಮನ ದಾಸ್ಯದಿಂದ ಇನ್ನೂ ನರಳುತ್ತಿತ್ತು. ಈ ಭಾಗಕ್ಕೆ ಮುಕ್ತಿ ದೊರಕಿಸಲು ನಡೆದ ಹೋರಾಟ ಇಡೀ ದೇಶದ ಸ್ವಾತಂತ್ರ್ಯ ಚಳುವಳಿಗಿಂತ ಕಡಿಮೆ ಏನಿಲ್ಲ. ಇಂತಹ ವಿಷಯ ನಮ್ಮದೇ ರಾಜ್ಯದ ನಮ್ಮ ಮಾತೃಭಾಷೆ ಕನ್ನಡದ ಪಠ್ಯ ವಿಷಯವಾಗಿಲ್ಲ. ಇದು ಅವಶ್ಯವಾಗಿ ಪಠ್ಯದ ಪಾಠವಾಗಬೇಕು ಎಂದು ರಾಘವ ಸ್ಮಾರಕ ಸಂಘದ ನಿವೃತ್ತ ಉಪನ್ಯಾಸಕ ಎನ್.ಬಸವರಾಜ ನುಡಿದರು.
ಅವರು ನಗರದ ರಾಘವ ಕಲಾಮಂದಿರ ಸರ್ಕಲ್‍ನಲ್ಲಿ ರಂಗತೋರಣ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ರಾಷ್ಟ್ರಧ್ವಜ ಹಾರಿಸಿ ಮಾತನಾಡುತ್ತಿದ್ದರು.
ನಿಜಾಮರ ಕ್ರೂರತನ, ರಜಾಕಾರರ ಅಟ್ಟಹಾಸದಿಂದ ಹೈದರಾಬಾದ್ ಪ್ರಾಂತ್ಯವು ನಲುಗಿ ಹೋಗಿತ್ತು. ಮಠ-ಮಂದಿರಗಳು ಶಾಲೆಗಳೂ ಎದುರಿಗೆ ಉರ್ದು ಶಾಲೆ ಹೆಸರಿನ ಬೋರ್ಡ್ ತಗುಲಿಸಿ ಕನ್ನಡ ಕಲಿಯುವಂತಾಗಿತ್ತು. ಈ ಚಳುವಳಿಯಲ್ಲಿ ಜಲಿಯನ್‍ವಾಲಾ ಬಾಗ್‍ನಂತಹ ಹತ್ಯಾಕಾಂಡ ನಡೆದಿದ್ದು ಸ್ವಾತಂತ್ರ್ಯ ಚಳುವಳಿಯ ಹೋರಾಟಕ್ಕಿಂತ ಕಡಿಮೆ ಏನಲ್ಲ. ಇಂತಹ ವಿಷಯ ಪಠ್ಯವಾಗಿ ಮಕ್ಕಳಿಗೆ ಯುವ ಪೀಳಿಗೆಗೆ ತಿಳಿದರೆ ಮತ್ತೆ ದಾಸ್ಯದಂತಹ ದುರ್ಭರ ದಿನಗಳು ಬರಲಾರವು ಎಂದು ಅವರು ತಿಳಿಸಿದರು.
ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಹಠಮಾರಿ ನಿಜಾಮನನ್ನು ಇಳಿಸಲು ದೇಶದ ಖಡಕ್ ಗೃಹಮಂತ್ರಿ ವಲ್ಲಭಬಾಯಿ ಪಟೇಲ ಅವರ ಚಾಣಾಕ್ಷತನ ಇಂದು ಈ ಭಾಗ ಭಾರತದ ಅವಿಭಾಜ್ಯ ಅಂಗವಾಗಿರುವುದನ್ನು ಸ್ಮರಿಸಿದರು.
ಆರಂಭದಲ್ಲಿ ರಾಷ್ಟ್ರಪಿತ ಮಹಾತ್ಮಾಗಾಂಧಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಕರ್ನಾಟಕ ಏಕೀಕರಣದ ಏಕೈಕ ಬಲಿದಾನ ಪಿಂಜಾರ್ ರಂಜಾನ್‍ಸಾಬ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯ ಜಿಲ್ಲಾ ಸಹ ಸಂಚಾಲಕ ಅಡವಿಸ್ವಾಮಿ, ನಗರ ಸಂಚಾಲಕ ವೆಂಕಟೇಶ ಬಡಿಗೇರ, ನಿವೃತ್ತ ಶಿಕ್ಷಕರಾದ ಕಲ್ಲುಕಂಭ ಶಿವೇಶ್ವರಗೌಡ, ಕೆ.ಎಂ.ಸಿದ್ದಲಿಂಗಯ್ಯ, ಜೆ.ಎಂ.ಆರ್.ಬಸವರಾಜ, ಜಿಲ್ಲಾ ಕಲಾವಿದರ ಸಂಘದ ಯಲ್ಲನಗೌಡ ಶಂಕರಬಂಡೆ, ತಿಪ್ಪೇಸ್ವಾಮಿ ಮುದ್ದಟನೂರು, ಗಂಗಣ್ಣ, ಶ್ರೀಮತಿ ಪುಷ್ಪಲತ, ಸುಬ್ಬಣ್ಣ, ಮತ್ತಿತರರು ಉಪಸ್ಥಿತರಿದ್ದರು.