ರಸ್ತೆ ಅಪಘಾತಕ್ಕೆ ಚಾಲಕರು ಲಾರಿ ಮಾಲೀಕರೆ ಹೊಣೆ
ಮಾಲೂರು ಮಾ.೧೦- ಟಿಪ್ಪರ್ ಲಾರಿ ಚಾಲಕರ ಅಜಾಗುರುಕತೆ ಚಾಲನೆಯಿಂದ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿದರೆ ಚಾಲಕರು ಹಾಗೂ ಕ್ರಷರ್‌ಗಳ ಮಾಲೀಕರನ್ನು ನೇರ ಹೋಣಿಗಾರಿಕೆ ಮಾಡಲಾಗುತ್ತದೆ ಆದ್ದರಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಮತ್ತೊಂದು ಜೀವದ ಜೊತೆ ಚೆಲ್ಲಾಟವಾಡದೇ ಟಿಪ್ಪರ್ ಲಾರಿ ವಾಹನಗಳನ್ನು ರಸ್ತೆಗಳಲ್ಲಿ ಚಾಲನೆ ಮಾಡುವಂತೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ರವಿಶಂಕರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಇತ್ತೀಚಿಗೆ ಟಿಪ್ಪರ್ ಲಾರಿಗಳಿಂದ ಆಗುತ್ತಿರುವ ಅಫಘಾತಗಳನ್ನು ನಿಯಂತ್ರಿಸುವ ಸಲುವಾಗಿ ಮಾಲೂರು, ಮಾಸ್ತಿ ಪೊಲೀಸ್ ಠಾಣಾ ಸಹಯೋಗದಲ್ಲಿ ಜಲ್ಲಿ ಕ್ರಷರ್ ಟಿಪ್ಪರ್ ಲಾರಿ ಚಾಲಕರು ಹಾಗೂ ಮಾಲೀಕರಿಗೆ ಹಮ್ಮಿಕೊಂಡಿದ್ದ ರಸ್ತೆ ಸಪ್ತಾಹ ಸುರಕ್ಷತ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯರಸ್ತೆಗಳಲ್ಲಿ ಟಿಪ್ಪರ್ ಲಾರಿಗಳ ರ್‍ಯಾಶ್ ಡ್ರೈವಿಂಗ್‌ನಿಂದ ಅಪಘಾತಗಳು ಸಂಭವಿಸುತ್ತದೆ. ಜನರ ಜೀವ ಕಳೆದುಕೊಂಡಾಗ ಸಾರ್ವಜನಿಕರು ಟಿಪ್ಪರ್ ಲಾರಿಗಳ ಚಾಲಕರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಚಾಲಕರ ಅಜಾಗರುಕತೆ ಚಾಲನೆ ಅಪಘಾತಕ್ಕೆ ಕಾರಣವಾಗುತ್ತದೆ. ಟಿಪ್ಪರ್ ಲಾರಿಗಳನ್ನು ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ಸಂಚಾರಿ ನಿಯಮಗಳನ್ನು ಅಳವಡಿಸಿಕೊಂಡು ವಾಹನಗಳು ಚಾಲಕನ ನಿಯಂತ್ರಣದಲ್ಲಿಟ್ಟು ಕೊಂಡು ಅಪಘಾತ ರಹಿತ ಚಾಲನೆ ಮಾಡಬೇಕು.
ಗಣಿಗಾರಿಕೆ ನಡೆಸುವುದು ಕಷ್ಟಕರ ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಇತರೆ ಜೀವಗಳ ಹಾನಿಯಾಗದಂತೆ ಟಿಪ್ಪರ್ ಲಾರಿ ಚಾಲನೆ ಮಾಡುವ ಚಾಲಕರಿಗೆ ಕ್ರಷರ್ ಮಾಲೀಕರು ಮಾರ್ಗದರ್ಶನ ನೀಡಬೇಕು ಟಿಪ್ಪರ್ ಲಾರಿಗಳಲ್ಲಿ ಹೆಚ್ಚುವರಿ ಲೊಡನ್ನು ಹಾಕದೆ ಕ್ರಷರ್‌ನಿಂದ ಲಾರಿ ಬಿಡುವಾಗ ಮೇಲೆ ಟಾರ್ಪಲ್ ಹಾಕಿಕೊಂಡು ರಸ್ತೆಯಲ್ಲಿ ಚಾಲನೆ ಮಾಡಬೇಕು ರಸ್ತೆಯಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದರೆ ಇನ್ಸ್‌ಪೆಕ್ಟರ್‌ಗಳನ್ನು ಹೊಣೆಗಾರಿಕೆ ಮಾಡಲಾಗುವುದು. ಬುಧವಾರ ರಾತ್ರಿ ಟಿಪ್ಪರ್ ಲಾರಿ ಚಾಲಕನ ಅಜಾಗರುಕತೆ ಚಾಲನೆಯಿಂದ ದ್ವಿಚಕ್ರ ವಾಹನ ಸವಾರ ಹಾಗೂ ಇಂಬದಿಯಲ್ಲಿ ಕುಳಿತಿದ್ದವರು ಟೇಕಲ್ ರಸ್ತೆಯ ಭುವನಹಳ್ಳಿ ಗೇಟ್ ಬಳಿ ಟಿಪ್ಪರ್ ಲಾರಿಗೆ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಟಿಪ್ಪರ್ ವಾಹನಗಳ ಜೊತೆಗೆ ಬೇರೆ ವಾಹನಗಳು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಕಳೆದ ೧೫ ದಿನಗಳಲ್ಲಿ ನಾಲ್ಕರಿಂದ ಐದು ಜನರು ಅಪಘಾತದಲ್ಲಿ ಜೀವವನ್ನು ಕಳೆದುಕೊಂಡಿದ್ದಾರೆ. ಚಾಲಕರು ವಾಹನ ಚಾಲನೆ ಮಾಡುವಾಗ ಕಾಕಿ ಬಟ್ಟೆ ಧರಿಸಿ ಮೊಬೈಲ್‌ನಲ್ಲಿ ಮಾತನಾಡದೆ ಕೆಟ್ಟ ಹವ್ಯಾಸಗಳನ್ನು ಬಿಟ್ಟು ಚಾಲನೆ ಮಾಡಬೇಕು, ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರಿಗೆ ಹಾಗೂ ನಿಮ್ಮನ್ನು ನಂಬಿಕೊಂಡಿರುವ ಕುಟುಂಬಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು, ರಸ್ತೆಯಲ್ಲಿ ಹಳೆಯ ಟಿಪ್ಪರ್ ವಾಹನಗಳು ಸಂಚರಿಸಿದರೆ ಪೊಲೀಸರು ಪರಿಶೀಲನೆ ನಡೆಸಿ ಜಪ್ತಿ ಮಾಡಲಿದ್ದಾರೆ. ಇದೇ ಶುಕ್ರವಾರದಿಂದ ಹಳೆ ಗಾಡಿಗಳ ಪರಿಶೀಲನೆ ಕಾರ್ಯವನ್ನೂ ಪೋಲಿಸ್ ಇಲಾಖೆ ಅಧಿಕಾರಿಗಳು ನಡೆಸಲಿದ್ದಾರೆ. ಕ್ರಷರ್ ಮಾಲೀಕರು, ಚಾಲಕರು ಪೊಲೀಸರ ಜೊತೆಗೆ ಕೈಜೋಡಿಸಿ ಹಳೆಯ ಲಾರಿಗಳನ್ನು ನಿಲ್ಲಿಸಬೇಕು ಎಂದರು.
ರಸ್ತೆಗಳಲ್ಲಿ ಟಿಪ್ಪರ್ ಲಾರಿಗಳಿಂದ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದರೆ ಲಾರಿ ಚಾಲಕರು ಹಾಗೂ ಮಾಲೀಕರು ನೇರವಾಗಿ ಹೊಣೆಗಾರಿಕೆ ಮಾಡಲಾಗುವುದು ರಸ್ತೆ ಸುರಕ್ಷತಾ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಇತರರ ಜೀವಗಳನ್ನು ಉಳಿಸುವ ಕೆಲಸ ಮಾಡುವಂತೆ ತಿಳಿಸಿದರು.
ಡಿವೈಎಸ್ಪಿ ಹುಮಾಯಿನ್ ನಾಗ್ತಿ ಪೆತ್ತ ಮಾತನಾಡಿ ಟಿಪ್ಪರ್ ಲಾರಿ ಚಾಲಕರ ಅಜಾಗರುಕತೆ ಚಾಲನೆಯಿಂದ ಇಬ್ಬರ ಸಾವು ಜಿಲ್ಲಾಡಳಿತ ಪೊಲೀಸ್ ಇಲಾಖೆ ನಿರ್ಲಕ್ಷವೆಂದು ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಚಾಲಕರು ಮುನ್ನೆಚ್ಚರಿಕೆ ವಹಿಸಿ ಸಂಚಾರಿ ನಿಯಮಗಳನ್ನು ಪಾಲಿಸಿ ಟಿಪ್ಪರ್ ಲಾರಿಗಳನ್ನು ಚಾಲನೆ ಮಾಡಿದರೆ ಅಪಘಾತಗಳನ್ನು ತಪ್ಪಿಸಿ ಮತ್ತೊಬ್ಬರ ಜೀವ ಕಾಪಾಡಬಹುದು, ಲಾರಿ ಚಾಲಕರು ಸಾರ್ವಜನಿಕರ ಜೊತೆ ಚೆಲ್ಲಾಟವಾಡಬಾರದು ಕ್ರಷರ್ ಮಾಲೀಕರು ವ್ಯಾಪಾರದ ಜೊತೆಗೆ ಸಾರ್ವಜನಿಕರ ಜೀವವು ಅಮೂಲ್ಯವಾದದು ಬುಧವಾರ ನಡೆದ ಘಟನೆ ಇದೊಂದು ದೇಶ ವ್ಯಾಪಿ ಪ್ರಚಾರವಾಗಿತ್ತು. ಒಳ್ಳೆ ಉದ್ದೇಶಗಳಿಂದ ಲಾರಿಗಳು ನಿಲ್ಲಿಸಿ ಜಾಗೃತಿ ಮೂಡಿಸಲು ಹೋದರೆ ಚಾಲಕರು ವಾಹನಗಳನ್ನು ನಿಲ್ಲಿಸಿ ಪೊಲೀಸರಿಗೆ ಸಹಕರಿಸಬೇಕು ಎಂದರು.
ಕ್ರಷರ್ ಮಾಲೀಕರು ವ್ಯಾಪಾರ ಮಾಡಿದರೆ ರಕ್ಷಣೆ ಕೊಡುವುದು ನಮ್ಮ ಜವಾಬ್ದಾರಿ ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಾಗಿ ಇರಬೇಕು, ಆರ್ಥಿಕವಾಗಿ ನಿಮಗೂ ಲಾಭ ಸರ್ಕಾರಕ್ಕೂ ಲಾಭವಾಗಿರುತ್ತದೆ. ಮಾಲೀಕರು ಚಾಲಕರು ದುರುದ್ದೇಶವಿಲ್ಲದೆ ರಸ್ತೆ ಸುರಕ್ಷತ ನಿಯಮಗಳು ಪಾಲಿಸಲು ಸೂಚಿಸಬೇಕು. ಸಾರಿಗೆ ಇಲಾಖೆ ನೀತಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ವೇಗವಾಗಿ ಬರುವಾಗ ರಸ್ತೆ ಸುರಕ್ಷತಾ ನಿಯಮಗಳು ಪಾಲಿಸಿದರೆ ಜೀವ ಉಳಿಸಬಹುದು ಅಪಘಾತಗಳು ಸಹ ತಪ್ಪಿಸಬಹುದು ನಗರಗಳಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಾರೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಸುರಕ್ಷತಾ ನಿಯಮಗಳು ಪಾಲನೆಯಾಗುತ್ತಿಲ್ಲ, ರಾಯಲ್ಟಿ ಇಲ್ಲದೆ ವಾಹನಗಳು ಚಾಲನೆ ಮಾಡಬಾರದು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಚೊಕ್ಕಾರೆಡ್ಡಿ ಮಾತನಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಾಹನಗಸ್ತು ಮಾಡುವಾಗ ಟಿಪ್ಪರ್ ಲಾರಿ ಚಾಲಕರು ಚಾಲನೆಯಲ್ಲಿ ವಾಹನವನ್ನೇ ಬಿಟ್ಟು ಓಡಿಹೋಗುತ್ತಾರೆ.
ಪರ್ಮಿಟ್ ಇಲ್ಲದೆ ವಾಹನ ಕ್ರಷರ್‌ಗಳ ಒಳಗೆ ಮಾಲೀಕರು ಬಿಡಬಾರದು ಪರವಾನಿಗೆ ಇಲ್ಲದೆ ಕಡೆ ಚಾಲಕರು ಹೋಗಬಾರದು ಅಪಘಾತಗಳನ್ನು ತಪ್ಪಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ೧೦೦ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳನ್ನು ತಡೆದು ಪಟ್ಟಣದ ಸರ್ಕಾರಿ ಬಾಲಕರ ಆಟದ ಮೈದಾನದಲ್ಲಿ ನಿಲ್ಲಿಸಿ ಪೊಲೀಸ್ ಇನ್ಸ್‌ಪೆಕ್ಟರ್ ವಸಂತ ಅವರು ದಂಡ ವಿಧಿಸಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದರು.
ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಆರ್ ರವಿಶಂಕರ್, ಡಿವೈಎಸ್ಪಿ ಹುಮಾಯಿನ್ ನಾಗ್ತಿ ಪೆತ್ತ ಕಡೆ ಮತ್ತು ಭೂ ವಿಜ್ಞಾನ ಇಲಾಖೆಯ ಅಭಿಯಂತರ ಚೊಕ್ಕ್ಕಾರೆಡ್ಡಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವಸಂತ್ ಕುಮಾರ್, ರಾಮಪ್ಪ ಗುತ್ತೇದಾರ್, ಉಪನಿರೀಕ್ಷಕರಗಳಾದ ರಾಮಚಂದ್ರಯ್ಯ, ಮಂಗಳಮ್ಮ, ನಾಗೋಜಿ ರಾವ್, ಕ್ರಷರ್ ಮಾಲೀಕರಾದ ಎಸ್ ಕೆ ವೆಂಕಟೇಶಪ್ಪ, ರಮೇಶ್ ಗೌಡ, ಟಿಪ್ಪರ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಂಜನಪ್ಪ, ಚಂದ್ರು, ಸೋಮಣ್ಣ, ಇನ್ನಿತರರು ಹಾಜರಿದ್ದರು.