ಮೇಲುಕೋಟೆಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕರಿಂದ ಚಾಲನೆ
ಸಂಜೆವಾಣಿ ವಾರ್ತೆ
ಮೇಲುಕೋಟೆ :ಮಾ.10:- ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವಕ್ಕೆ ಸ್ವಚ್ಛತೆಯ ಮುನ್ನುಡಿ ಬರೆಯಲಾಗುತ್ತಿದ್ದು ಭಕ್ತರು ಹಾಗೂ ನಾಗರೀಕರು ಮೇಲುಕೋಟೆಯ ನಿರಂತರ ಸ್ವಚ್ಛತೆ ಕಾಪಾಡಲು ಸಹಕಾರ ನೀಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದರು.
ಅವರು ಮೇಲುಕೋಟೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕದ ಪವಿತ್ರ ಕ್ಷೇತ್ರವಾದ ಮೇಲುಕೋಟೆಯಲ್ಲಿ ಸ್ವಯಂಸೇವಾ ತಂಡಗಳು ಹಾಗೂ ಭಕ್ತರು ಮುಂದೆ ಬಂದು ಪ್ರತಿ ಶನಿವಾರ ಅಥವಾ ಭಾನುವಾರಗಳಂದು ಸ್ವಚ್ಚತಾ ಶಿಭಿರಗಳನ್ನು ಆಯೋಜಿಸಬೇಕು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಹ ತಿಂಗಳಿಗೊಂದು ದಿನ ಸ್ಮಾರಕಗಳ ಬಳಿ ಸ್ವಚ್ಚತಾಕಾರ್ಯ ಹಮ್ಮಿಕೊಳ್ಳಬೇಕು ಎಂದ ಶಾಸಕರು ಭಕ್ತರು ಮತ್ತು ನಾಗರೀಕರು ಮೇಲುಕೋಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಕೆಮಾಡಬಾರದು ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚತೆ ಕಾಪಾಡುವ ಸಂಬಂಧ ಅಲ್ಲಲ್ಲಿ ನಾಮಫಲಕ ಹಾಕಬೇಕು ರಾಯಗೋಪುರ ಅಕ್ಕತಂಗಿಕೊಳ ಹಾಗೂ ಇತರ ಕಡೆ ನಗರಗಳ ಉದ್ಯಾನವನದಲ್ಲಿರುವಂತೆ ಆಕರ್ಷಕ ಕಸದ ತೊಟ್ಟಿಗಳನ್ನು ಅಳವಡಿಸಬೇಕು ಎಂದು ಗ್ರಾ.ಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ ಶಾಸಕರು ವೈರಮುಡಿ ಜಾತ್ರಾಮಹೋತ್ಸವದ ವೇಳೆ ಮಾರ್ಚ 16 ರಿಂದ 28ರವರೆಗೆ ನಿರಂತರ ಸ್ವಚ್ಚತೆಗೆ ವಿಶೇಷ ಗಮನ ನೀಡಲಾಗಿದೆ. ವಿವಿಧ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ಪೌರಕಾರ್ಮಿಕರನ್ನು ನಿಯೋಜಿಸಿ ಪ್ರತಿದಿನ ನಿರಂತರ ಸ್ವಚ್ಚತೆ ಕಾಪಾಡಲು ಕ್ರಮವಹಿಸಲಾಗಿದೆ ಎಂದರು
ರಾಯಗೋಪುರ ಬೀದಿಯಲ್ಲಿ ಖಾಲಿನಿವೇಶನದಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ಕಸಗಳನ್ನು ಸೌದೆಗಳನ್ನು ಕಾರ್ಯಕರ್ತರೊಂದಿಗೆ ಸೇರಿ ಶುಚಿಗೊಳಿಸಿದ ಶಾಸಕರು ವೈರಮುಡಿ ಉತ್ಸವ ಪೂರ್ವಸಿದ್ಧತಾ ಸಭೆಯ ನಿರ್ಣಯದಂತೆ ಸೈಟ್ ಮಾಲೀಕರಿಗೆ ನೋಟೀಸ್ ಜಾರಿಮಾಡಿ ಜೆ.ಸಿ.ಬಿ ತರಿಸಿ ಖಾಲಿನಿವೇಶನಗಳಲ್ಲಿರುವ ಕಸಗಳನ್ನು ಸ್ವಚ್ಚಮಾಡಿ ಎರಡು ಮೂರು ದಿನಗಳಲ್ಲಿ ಈ ಕಾರ್ಯ ಆಗಬೇಕು ಕಸ, ಗಿಡಗಂಟೆಗೆ ಬೆಳೆದಿರುವ ಖಾಲಿ ನಿವೇಶನ ಮಾಲೀಕರಿಗೆ ದಂಡ ಹಾಕಿ ಎಂದೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು
ಬೆಳಿಗ್ಗೆ 8ಗಂಟೆಯ ವೇಳೆಗೆ ನೂರಕ್ಕೂ ಹೆಚ್ಚು ರೈತಸಂಘದ ಕಾರ್ಯಕರ್ತರೊಂದಿಗೆ ಮೇಲುಕೋಟೆಗೆ ಆಗಮಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚೆಲುವನಾರಾಯಣಸ್ವಾಮಿ ದೇವಾಲಯದ ಆವರಣ ರಾಯಗೋಪುರ, ಅಕ್ಕತಂಗಿಕೊಳ ಆವರಣ ಕಲ್ಯಾಣಿ ಆವರಣಗಳಲ್ಲಿ ಗಿಡಗಂಟೆಗಳನ್ನು ಕಿತ್ತು, ಅಲ್ಲಲ್ಲಿ ಬಳಸಿ ಎಸೆದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಚಗೊಳಿಸಿದರು ಮೇಲುಕೋಟೆಯಲ್ಲಿ ನಿರಂತರವಾಗಿ ಶುಚಿತ್ವಕಾಪಾಡಲು ಗ್ರಾಮ ಪಂಚಾಯಿತಿ ಮತ್ತು ದೇವಾಲಯದ ಆಡಳಿತ ಶ್ರಮಿಸಬೇಕು ಪೌರಕಾರ್ಮಿಕರನ್ನು ನಿಯೋಜಿಸಬೇಕು ಎಂದೂ ಸೂಚನೆ ನೀಡಿದರು.
ಸ್ವಚ್ಚತಾ ಆಂದೋಲನದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಹಿರಿಯ ಮುಖಂಡ ಗೋವಿಂದೇಗೌಡ, ಪಾಂಡವಪುರ ತಾಲ್ಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು ರೈತಸಂಘದ ಮುಖಂಡರಾದ ಚಿಕ್ಕಾಡೆ ಹರೀಶ್, ಜೋಗಿರಾಜೇಗೌಡ, ಕನಗೋನಹಳ್ಳಿ ಪರಮೇಶಗೌಡ, ಲೋಕೇಶ್, ಮಹೇಶ್ ಸೋಮು ಮೇಲುಕೋಟೆ ದಿಲೀಪ್ , ಸುಬ್ಬಣ್ಣ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್, ಗ್ರಾಮ ಆಡಳಿತಾಧಿಕಾರಿ ರಮೇಶ್ ಭಾಗವಹಿಸಿದ್ದರು ವಿವಿಧ ಗ್ರಾಮ ಪಂಚಾಯಿತಿಯಿಂದ ಸ್ವಚ್ಚತಾವಾಹನಗಳು ಆಗಮಿಸಿದ್ದವು.