ವಾಸು ಅವರ ನಿಧನಕ್ಕೆ ಡಿಕೆಶಿ ಸಂತಾಪ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.10:- ಮಾಜಿ ಶಾಸಕ ವಾಸು ಅವರ ಅಂತಿಮ ದರ್ಶನ ಪಡೆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ವಾಸುರವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ನನಗೆ ಅವರು ಬಹಳ ಆತ್ಮೀಯರಾಗಿದ್ದರು. ಬಹಳ ವರ್ಷಗಳಿಂದ ಅವರೊಂದಿಗೆ ಒಡನಾಟವಿತ್ತು. ವಾಸು ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ದುಡಿದವರು. ನನ್ನ ಬಗ್ಗೆ ಅವರಿಗೆ ಹೆಚ್ಚಿನ ಅಭಿಮಾನ ಇತ್ತು
ಅವರು ಮೇಯರ್ ಆಗಿದ್ದ ಅವಧಿಯಲ್ಲಿ ಮಾಡಿದ ಜನಪರ ಕಾರ್ಯಗಳು ಜನಮಾನಸದಲ್ಲಿ ಉಳಿದಿದ್ದವು ಎಂದರು.
ಮೇಯರ್ ಆಗಿದ್ದ ವೇಳೆ ಚಾಮುಂಡಿ ವಿಹಾರ ಕ್ರೀಡಾಂಗಣ ಕ್ಕೆ ಜಾಗ ಮಂಜೂರು ಮಾಡಿಕೊಡಲಾಯಿತು. ಮುಂಬರುವ ಪಾರ್ಲಿಮೆಂಟ್ ಚುನಾವಣೆ ಸಂಬಂಧ ಅವರೊಂದಿಗೆ ಚರ್ಚೆ ನಡೆಸಿದ್ದೆವು. ಅವರು ಬಹಳ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ.
ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.
ಸರ್ಕಾರದ ಪರವಾಗಿ ಬಂದು ಅವರಿಗೆ ಗೌರವ ಸಲ್ಲಿಸಿದ್ದೇನೆಂದರು.